Advertisement

ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು?: ಸಚಿವೆ ಶಶಿಕಲಾ ಜೊಲ್ಲೆ

03:26 PM Aug 07, 2021 | Team Udayavani |

ವಿಜಯಪುರ: ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು, ಮಾಡುವ ಮನಸ್ಸು ಇರಬೇಕು. ಇದರಲ್ಲಿ ಕನಿಷ್ಟ, ಗರಿಷ್ಠ ಎಂಬುದೇನಿಲ್ಲ. ಹಿಂಬಡ್ತಿ, ಮುಂಬಡ್ತಿ ಎಂದೂ ಇಲ್ಲ ಎಂದು ಖಾತೆ ಹಂಚಿಕೆ ಕುರಿತು ಮುಜರಾಯಿ ಖಾತೆ ಪಡೆದಿರುವ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

Advertisement

ಶನಿವಾರ ವಿಜಯಪುರ ‌ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡುವವರಿಗೆ ಮತ್ತು ಜನತೆಗೆ ನ್ಯಾಯ ಕೊಡಬೇಕಾದರೆ ಖಾತೆ ಯಾವುದಾದರೇನು. ಹೀಗಾಗಿ ಖಾತೆ ಹಂಚಿಕೆ ಕುರಿತು ನನಗೆ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡು ವರ್ಷಗಳಿಂದ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ‌ ಕೆಲಸ ಮಾಡಿದ ಸಮಾಧಾನವಿದೆ ಎಂದರು.

ಸ್ವಂತ ಕ್ಷೇತ್ರದಲ್ಲಿ ಶಾಸಕಿಯಾಗಿ, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಉತ್ತಮ ಕೆಲಸ ಮಾಡಿದ ಸಂತೃಪ್ತಿ ನನಗಿದೆ. ನನ್ನ ಜವಾಬ್ದಾರಿಯನ್ನು ‌ನಾನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ ಎಂಬ ಸಂತಸವಿದೆ. ಈಗ ವಹಿಸಿರುವ ಖಾತೆಯ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತೇನೆ.  ಜೊತೆಗೆ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ ಎಂದರು‌.

ಇದನ್ನೂ ಓದಿ:ನನ್ನ ಮೇಲೆ ಬಹಳ‌ ದೊಡ್ಡ ಹೊಣೆಗಾರಿಕೆ ಹೊರಿಸಿದ್ದಾರೆ: ಗೃಹ ಸಚಿವ ಅರಗ ಜ್ಞಾನೆಂದ್ರ

Advertisement

ಇನ್ನು ಖಾತೆ ಹಂಚಿಕೆ ವಿಷಯದಲ್ಲಿ ಹಿಂಬಡ್ತಿ, ಮುಂಬಡ್ತಿ ಎಂಬುದಿಲ್ಲ, ಅದು ಅವರವರ ಭಾವದ ಮೇಲೆ ಅವಲಂಬಿತ ಆಗಿರುತ್ತದೆ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು ಅಷ್ಟೇ ಎಂದರು.

ಇದೇ ವೇಳೆ ಅಕ್ಕಮಹಾದೇವಿ ವಚನ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ಎಂದು ಉಲ್ಲೇಖಿಸಿದ ಸಚಿವೆ ಶಶಿಕಲಾ ಜೊಲ್ಲೆ, ನಾನು ರಾಜಕಾರಣ ಮಾಡುತ್ತಿದ್ದೇನೆ, ಓರ್ವ ಮಹಿಳೆಯಾಗಿ, ಶಾಸಕಿಯಾಗಿ, ಸಚಿವೆಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ಮಾಡುವುದಷ್ಟೇ ನನ್ನ ಕೆಲಸ. ಉಳಿದಿದ್ದೆಲ್ಲ ಗೌಣ ಎಂದು ತಮಗೆ ನೀಡಿರುವ ಮುಜರಾಯಿ ಖಾತೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next