ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಗಂಗೂರ ಗ್ರಾಮದಲ್ಲಿ ನರಸಮ್ಮ ಗುಬಚಿ ಎನ್ನುವ ರೈತ ಮಹಿಳೆಯೊಬ್ಬರು ಪ್ರವಾಹ ಬಂದಾಗ ನಾವು ವಿಷ ಕುಡಿದು ಸತ್ತು ಬಿಡಬೇಕಿತ್ತು ಇಲ್ಲವೆ ಹೊಳೆದಂಡೆಯಲ್ಲಿ ಹರಿದುಕೊಂಡು ಹೋಗಬೇಕಿತ್ತು. ಆದರೆ ಎ.ಎಸ್.ಪಾಟೀಲ್ ನಡಹಳ್ಳಿಯವರು ನಮ್ಮ ಶಾಸಕರಾಗಿ ನಮ್ಮ ಬೆನ್ನ ಹಿಂದೆ ಇದ್ದಾರೆನ್ನುವ ಕಾರಣಕ್ಕಾಗಿ ನಾವಿನ್ನೂ ಬದುಕಿದ್ದೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಎದುರೇ ಹೇಳಿ ಪರಿಸ್ಥಿತಿಯ ಗಂಭೀರತೆ ಬಿಡಿಸಿಟ್ಟ ಘಟನೆ ನಡೆಯಿತು.
ಸಚಿವೆಯರು ಶಾಸಕ ನಡಹಳ್ಳಿ ಮತ್ತು ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಹದ ಹಾನಿ ಕುರಿತು ಪರಿಶೀಲನೆ ನಡೆಸಲು ಗ್ರಾಮಕ್ಕೆ ಬಂದಾಗ ದಿಢೀರನೆ ನಡೆದ ಈ ಘಟನೆ ಕೆಲಕಾಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದಂತಾಗಿತ್ತು.
ನಮ್ಮ ಹೊಳೆದಂಡಿ ಭಾಗದ ಜನರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿ ದನಿ ಎತ್ತಬೇಕು ಎಂದು ಒತ್ತಾಯಿಸಿದರು. ಇವರ ಅಳಲು ಆಲಿಸಿದ ಸಚಿವೆಯರು ನೀವು ಹೇಳುವ ಎಲ್ಲ ಸಮಸ್ಯೆಗಳನ್ನು ನಿಮ್ಮ ಶಾಸಕರು ನನಗೆ ಮೊದಲೇ ಹೇಳಿದ್ದಾರೆ. ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ ಎಂದು ಸಮಾಧಾನಪಡಿಸಲು ಮುಂದಾದರು. ಆಗ ಮಾತನಾಡಿದ ಶಾಸಕ ನಡಹಳ್ಳಿಯವರು ಈಗಾಗಲೇ ಹೊಳೆದಂಡಿ ಭಾಗದ ಸಮಸ್ಯೆಗಳ ಪರಿಹಾರ ಕುರಿತು ಸಚಿವೆಯರಿಗೆ ಮನವಿ ಸಲ್ಲಿಸಲಾಗಿದೆ. ಅವರು ಸರ್ಕಾರದ ಗಮನಕ್ಕೆ ತಂದು, ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ಬೇಗ ಪರಿಹಾರ ದೊರಕಿಸಿ ಕೊಡುವ ವಿಶ್ವಾಸ ಇದೆ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಹುನಗುಂದ ಬಲದಿನ್ನಿ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಇದನ್ನೂ ಓದಿ :ಉ. ಪ್ರ ಚುನಾವಣೆ : ರಾಜ್ಯಾದ್ಯಂತ ‘ಬೂತ್ ವಿಜಯ್ ಅಭಿಯಾನ’ ಅಡಿಯಲ್ಲಿ ಕಾರ್ಯಕ್ರಮ : ಬಿಜೆಪಿ