ಕೊಪ್ಪಳ: ಸಚಿವ ಸ್ಥಾನದಿಂದ ಕೈ ಬಿಡುವ ಕುರಿತಂತೆ ನನಗಂತೂ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಈ ವರೆಗೂ ಸೂಚನೆ ಬಂದಿಲ್ಲ. ಸುಮ್ಮನೆ ಮಾಧ್ಯಮದಲ್ಲಷ್ಟೆ ನನ್ನ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ನಾನೇನು ಹೆಚ್ಚು ಚರ್ಚೆ ಮಾಡಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.
ಕನಕಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಯಾವುದೇ ನಾಯಕರು ಸಚಿವ ಸ್ಥಾನದ ಕುರಿತು ನನ್ನೊಂದಿಗೆ ಚರ್ಚೆ ಮಾಡಿಲ್ಲ. ಮಾಧ್ಯಮದಲ್ಲಿ ಎರಡು ಬಾರಿ ಚರ್ಚೆಗೆ ಬಂತು. ಎರಡೂ ಬಾರಿ ಉಳಿದುಕೊಂಡಿದ್ದೇನೆ. ಮೂರನೇ ಬಾರಿಯೂ ಈಗ ಮತ್ತೆ ಚರ್ಚೆಗೆ ಬರುತ್ತಿದೆ. ಕೊಟ್ಟ ಕೆಲಸವನ್ನಂತೂ ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಸುಮ್ಮನೆ ಚರ್ಚೆ ನಡೆಯುತ್ತಿವೆ. ಆ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ:ರಾಧಿಕಾ ಯಾರೋ ಗೊತ್ತಿಲ್ಲ! ಅವರ ಬಗ್ಗೆ ನನ್ನ ಕೇಳಬೇಡಿ ಎಂದ ಕುಮಾರಸ್ವಾಮಿ
ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿಯೇ ಅತಿ ದೊಡ್ಡ ಜಿಲ್ಲೆಯಾಗಿದೆ. ರಾಜಕಾರಣದಲ್ಲೂ ತನ್ನದೇ ಪಾತ್ರವನ್ನು ಹೊಂದಿದೆ. ಅಲ್ಲಿ ಸಚಿವರ ಸಂಖ್ಯೆಯು ಜಾಸ್ತಿಯಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನನಗೆ ಕೊಟ್ಟಿರುವ ಸ್ಥಾನವನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಹೈಕಮಾಂಡ್ ಏನು ಆದೇಶ ಮಾಡುತ್ತದೆಯೋ ಅದರಂತೆ ಮುನ್ನಡೆವೆ. ನಾನು ಸಂಘಟನೆಯಿಂದ ಬೆಳೆದು ಬಂದವಳು. ಹೈಕಮಾಂಡ್ ಹೇಳಿದಂತೆ ಬದ್ಧವಾಗಿ ಮುನ್ನಡೆಯುವೆ ಎಂದರು.
ಬೆಳಗಾವಿ ಲೋಕಸಭಾ ಟಿಕೆಟ್ ಕುರಿತಂತೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಜ.17 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಕೋರ ಕಮೀಟಿ ಸಭೆಯಲ್ಲಿ ಟಿಕೆಟ್ ಕುರಿತು ಚರ್ಚೆ ನಡೆಯುತ್ತದೆ. ಎಲ್ಲ ನಾಯಕರೊಂದಿಗೆ ಚರ್ಚಿಸಿ ಟಿಕೆಟ್ ಅನ್ನು ಜಾರಕಿಹೊಳೆ ಕುಟುಂಬಕ್ಕೆ ಕೊಡಬೇಕಾ ಅಥವಾ ಬೇರೆಯಾರಿಗೆ ಟಿಕೆಟ್ ಕೊಡಬೇಕಾ ಎನ್ನುವುದು ನಿರ್ಧಾರವಾಗಲಿದೆ ಎಂದರು.
ಅಪೌಷ್ಠಿಕ ನಿವಾರಣೆಗೆ ನಮ್ಮ ಸರ್ಕಾರವು ಹಲವು ಕಾರ್ಯ ಕೈಗೊಂಡಿತು. ಲಾಕ್‌ಡೌನ್ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯು ನಮ್ಮೊಂದಿಗೆ ನೆರವಿಗೆ ಬಂದಿತು. ಕೊಪ್ಪಳ ಜಿಲ್ಲೆಯಲ್ಲಿ ಅಪೌಷ್ಠಿಕತೆ ನಿವಾರಣೆಗೆ ನುಗ್ಗೆ ಪೌಡರ್ ಪೂರೈಸುತ್ತಿದ್ದು, ಆ ಕುರಿತು 2-3 ಸಭೆಗಳು ನಡೆದಿವೆ. ಪೌಡರ್ ಕುರಿತಂತೆ ತಜ್ಞರ ಜೊತೆ ಚರ್ಚೆ ಮಾಡಿ ಅದನ್ನು ಮುಂದುವರೆಸಬೇಕಾ ಎನ್ನುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವೆನು ಎಂದರು.