ಹೊಸದಿಲ್ಲಿ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಪುನಾರಚನೆಯಲ್ಲಿ ಶಶಿ ತರೂರ್ ಮತ್ತು ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (CWC) ಸೇರಿಸಿಕೊಳ್ಳಲಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್, X, ಪೋಸ್ಟ್‌ನಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ನಾಮನಿರ್ದೇಶನ ಮಾಡಿದ ಪಕ್ಷದ ನಿರ್ಧಾರ ” ದೊಡ್ಡ ಗೌರವ” ಎಂದು ಹೇಳಿದ್ದಾರೆ.
“ಕಳೆದ 138 ವರ್ಷಗಳಲ್ಲಿ ಪಕ್ಷಕ್ಕೆ ಮಾರ್ಗದರ್ಶನ ನೀಡುವಲ್ಲಿ CWC ನಿರ್ವಹಿಸಿದ ಐತಿಹಾಸಿಕ ಪಾತ್ರದ ಬಗ್ಗೆ ತಿಳಿದಿರುವವನಾಗಿ, ಈ ಸಂಸ್ಥೆಯ ಭಾಗವಾಗಿರಲು ನಾನು ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ತನ್ನ ಸಮರ್ಪಿತ ಸಹೋದ್ಯೋಗಿಗಳೊಂದಿಗೆ ಪಕ್ಷಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
39 ಪ್ರಮುಖರು
ಪುನರ್ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಚಿನ್ ಪೈಲಟ್ ಮತ್ತು ಶಶಿ ತರೂರ್ ಸೇರಿದಂತೆ 39 ಸದಸ್ಯರನ್ನು ಒಳಗೊಂಡಿದೆ. ಸಚಿನ್ ಪೈಲಟ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಬಿಕ್ಕಟ್ಟನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಸಮಿತಿಯಲ್ಲಿ ಸಚಿನ್ ಪೈಲಟ್ ಅವರನ್ನು ಸೇರ್ಪಡೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಮಾಜಿ ಸಂಸದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ, ದಿವಂಗತ ಪ್ರಿಯಾ ರಂಜನ್ ದಾಸ್ ಮುನ್ಷಿ ಅವರ ಪತ್ನಿ ದೀಪಾ ದಾಸ್ ಮುನ್ಷಿ, ರಾಜ್ಯಸಭಾ ಸದಸ್ಯ ಎಂಎಸ್ ಹುಸೇನ್ ಸ್ಥಾನ ಪಡೆದಿದ್ದಾರೆ. 2020ರಲ್ಲಿ ಪಕ್ಷದಲ್ಲಿ ಸುಧಾರಣೆಗೆ ಆಗ್ರಹಿಸಿ ಜಿ-23 ಗುಂಪು ಬರೆದಿರುವ ಪತ್ರಕ್ಕೆ ಸಹಿ ಹಾಕಿದ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಪಕ್ಷದ ಉನ್ನತ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. 39 ಸದಸ್ಯರ ಪೈಕಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಚಿನ್ ಪೈಲಟ್, ಗೌರವ್ ಗೊಗೊಯ್ ಮತ್ತು ಕಮಲೇಶ್ವರ್ ಪಟೇಲ್ ಅವರಾಗಿದ್ದಾರೆ.