ಜೈಪುರ್: ಪ್ರಧಾನಿ ನರೇಂದ್ರ ಮೋದಿ ಅವರು ಅಸಾಧಾರಣ ಉತ್ಸಾಹದ ಮತ್ತು ಕ್ರಿಯಾಶೀಲತೆಯ ವ್ಯಕ್ತಿಯಾಗಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅಪಾರ ಕೊಡುಗೆ ನೀಡಿದ್ದಾರೆ…ಇದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಶ್ಲಾಘನೆಯ ನುಡಿಯಾಗಿದೆ.
ಇದನ್ನೂ ಓದಿ:ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಳಿಕ ದೂರವಾದ ಎಲಾನ್ ಮಸ್ಕ್- ಗ್ರಿಮ್ಸ್
ಜೈಪುರ್ ಸಾಹಿತ್ಯೋತ್ಸವದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ತರೂರ್, ಪ್ರಧಾನಿ ಮೋದಿಯವರು ರಾಜಕೀಯವಾಗಿ ಕೆಲವೊಂದು ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಅಂತರದಿಂದ ಬಿಜೆಪಿ ಜಯ ಸಾಧಿಸಲಿದೆ ಎಂಬುದನ್ನು ನಾವು ನಿರೀಕ್ಷಿಸಿರಲಿಲ್ಲ. ಆದರೆ ನಮ್ಮ ಊಹೆಗೂ ಮೀರಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.
ಉತ್ತರಪ್ರದೇಶ ಚುನಾವಣಾ ಫಲಿತಾಂಶದ ಕುರಿತು ಅಭಿಪ್ರಾಯವ್ಯಕ್ತಪಡಿಸಿದ ಅವರು, ಮುಂದೊಂದು ದಿನ ದೇಶದ ಮತದಾರರು ಭಾರತೀಯ ಜನತಾ ಪಕ್ಷವನ್ನು ಅಚ್ಚರಿಗೆ ದೂಡಲಿದ್ದಾರೆ. ಆದರೆ ಇಂದು ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಈ ಸಂದರ್ಭದಲ್ಲಿ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ. ಅವರು ನಮ್ಮ ಸಮಾಜದಲ್ಲಿ ದೇಶವನ್ನು ಕೋಮು ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸುವ ಶಕ್ತಿಗಳನ್ನು ಹುಟ್ಟುಹಾಕಿರುವುದು ದುರದೃಷ್ಟಕರ ಎಂದು ದೂರಿದರು.
ಉತ್ತರಪ್ರದೇಶದ ವಿಚಾರದಲ್ಲಿ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗುವವರೆಗೂ ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆಗಳು ಇದ್ದಿರಲಿಲ್ಲ. ಬಹುತೇಕ ಜನರು ಜಿದ್ದಾಜಿದ್ದಿನ ಸ್ಪರ್ಧೆಯನ್ನೇ ನಿರೀಕ್ಷಿಸಿದ್ದರು. ಕೆಲವರು ಸಮಾಜವಾದಿ ಪಕ್ಷ ಮುಂದಿರುವುದಾಗಿ ವ್ಯಾಖ್ಯಾನಿಸಿದ್ದರು.
ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ತರೂರ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪರವಾಗಿ ಗಮನಾರ್ಹ ಪ್ರಚಾರವನ್ನು ಕೈಗೊಂಡಿದ್ದರು. ನನ್ನ ಊಹೆಯ ಪ್ರಕಾರ, ಕೇವಲ ಒಬ್ಬ ವ್ಯಕ್ತಿಯ ಪ್ರಚಾರದ ಆಧಾರದ ಮೇಲೆ ನಂಬಿಕೆಯನ್ನಿಡುವ ತಪ್ಪು ನಿರ್ಧಾರ ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಭಾವಿಸುವುದಾಗಿ ಹೇಳಿದರು.