Advertisement

ಐಸಿಸಿ ಹುದ್ದೆ ಪೂರೈಸಿದ ಶಶಾಂಕ್‌ ಮನೋಹರ್‌

11:31 PM Jul 01, 2020 | Sriram |

ದುಬಾೖ: ಭಾರತದ ಶಶಾಂಕ್‌ ಮನೋಹರ್‌ ಐಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಎರಡು ವರ್ಷಗಳ ಎರಡು ಅವಧಿಗಳಲ್ಲಿ ಕ್ರಿಕೆಟ್‌ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದ್ದರು. ಬುಧವಾರ ಇದರ ಕಾರ್ಯಾವಧಿ ಮುಗಿಯಿತು.

Advertisement

ನೂತನ ಅಧ್ಯಕ್ಷರು ಚುನಾಯಿತರಾಗುವ ತನಕ ಉಪಾಧ್ಯಕ್ಷ ಇಮ್ರಾನ್‌ ಖ್ವಾಜಾ ಅವರೇ ಉಸ್ತುವಾರಿ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಐಸಿಸಿ ನಿಯಮದಂತೆ ಎರಡು ವರ್ಷಗಳ 3 ಅವಧಿಗಳ ತನಕ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ಸಿದ್ಧತೆ ಆರಂಭಗೊಂಡಿರುವ ಕಾರಣ ಶಶಾಂಕ್‌ ಮನೋಹರ್‌ ಮುಂದುವರಿಯುವ ಯಾವುದೇ ಸಾಧ್ಯತೆ ಇಲ್ಲ. ಮುಂದಿನ ವಾರ ಐಸಿಸಿ ಮಂಡಳಿ ಚುನಾವಣೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಅಧ್ಯಕ್ಷ ಹುದ್ದೆಗೆ ಸೌರವ್‌ ಗಂಗೂಲಿ ಹೆಸರು ಕೂಡ ಕೇಳಿಬರುತ್ತಿದೆ.

“ಐಸಿಸಿ ಹಾಗೂ ಇಡೀ ಕ್ರಿಕೆಟ್‌ ಕುಟುಂಬದ ಪರವಾಗಿ ಶಶಾಂಕ್‌ ಮನೋಹರ್‌ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತಿದೆ. ಅವರ ಭವಿಷ್ಯ ಉಜ್ವಲವಾಗಲಿ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾಹ್ನಿ ಶುಭ ಹಾರೈಸಿದ್ದಾರೆ.

ಶಶಾಂಕ್‌ ಮನೋಹರ್‌ 2015ರ ನವೆಂಬರ್‌ನಲ್ಲಿ ಮೊದಲ ಸಲ ಐಸಿಸಿ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದರು. ಇದಕ್ಕೂ ಮೊದಲು 2008ರಿಂದ 2011ರ ತನಕ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ವೃತ್ತಿಯಲ್ಲಿ ಅವರು ವಕೀಲರಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next