ಒಂಬತ್ತು ವರ್ಷಗಳಾಗಿವೆ ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗಕ್ಕೆ ಬಂದು. ತಮ್ಮದೇ ಸ್ವಂತ ಬ್ಯಾನರ್‌ನ ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಅವರು, ಆ ನಂತರ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತ ಬಂದಿದ್ದಾರೆ. ಈ ಗ್ಯಾಪ್‌ನಲ್ಲಿ ಅವರು ನಟಿಸಿದ ಚಿತ್ರಗಳು ಕೇವಲ 15. ಅದರಲ್ಲಿ 12 ಚಿತ್ರಗಳು ಕನ್ನಡದಲ್ಲೇ ಇವೆ. ಇನ್ನು ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ತಲಾ ಒಂದೊಂದು ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇಷ್ಟು ಚಿತ್ರಗಳಲ್ಲಿ ದೊಡ್ಡ ಹಿಟ್ ಎಂದು ಯಾವುದೇ ಚಿತ್ರವಿಲ್ಲದಿದ್ದರೂ, ಅದರಿಂದ ಶರ್ಮಿಳಾಗೆ ಸಮಸ್ಯೆ ಯೇನಾಗಿಲ್ಲ. ಚಿತ್ರ ಗೆಲ್ಲಲಿ, ಬಿಡಲಿ ಅವರಂತೂ ಒಂದಿಲ್ಲೊಂದು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಈಗ ಅವರು ಇನ್ನೂ ಒಂದು ಹೊಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡು ವುದಕ್ಕೆ ಸಜ್ಜಾಗಿ ದ್ದಾರೆ.
ಇದು ವರೆಗೂ ಅವರು ಹೆಚ್ಚಾಗಿ ಗ್ಲಾಮರಸ್ ಮತ್ತು ಬಬ್ಲಿ ಪಾತ್ರಗಳಲ್ಲೇ ಕಾಣಿಸಿ ಕೊಂಡಿದ್ದಾರೆ. ಈಗ ಮೊದಲ ಬಾರಿಗೆ ತುಂಬಾ ಗಂಭೀರವಾದ ಮತ್ತು ಅಷ್ಟೇ ಮೆಚೂರ್ ಆದಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಹೆಸರು ಆಕೆ. ಆಕೆ, ತಮಿಳಿನ ಮಾಯ ಎಂಬ ಚಿತ್ರದಿಂದ ಸ್ಫೂರ್ತಿ ಪಡೆದಂತಹ ಚಿತ್ರ. ಇದೇ ತಿಂಗಳು ಎಲ್ಲ ಕಡೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ಆ ದಿನಗಳು ಖ್ಯಾತಿಯ ಚೈತನ್ಯ ನಿರ್ದೇಶಿಸಿದ್ದಾರೆ. ಇನ್ನು ಸೂರಿ ಮತ್ತು ಕಲೈ ಎನ್ನುವವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದೊಂದು ತುಂಬಾ ಸವಾಲಿನ ಪಾತ್ರ ಎನ್ನುತ್ತಾರೆ ಶರ್ಮಿಳಾ. “ಇದುವರೆಗೂ ನಾನು ಗ್ಲಾಮರಸ್ ಇಲ್ಲ, ಬಬ್ಲಿ ಪಾತ್ರಗಳನ್ನು ನಿರ್ವಹಿಸಿದ್ದೆ. ಇದೇ ಮೊದಲ ಬಾರಿಗೆ ಬಹಳ ಗಂಭೀರ ಮತ್ತು ಮೆಚೂರ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ಸ್ವಲ್ಪವೂ ಗ್ಲಾಮರ್ ಇಲ್ಲ. ಸೂಪರ್ ನ್ಯಾಚುರಲ್ ಅಂಶಗಳಿರುವ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಸುಮಾರು ಎರಡು ವಾರಗಳ ಕಾಲ ಕೂತು, ಸಾಕಷ್ಟು ರಿಹರ್ಸಲ್ ಮಾಡಿಯೇ ಭಿನಯಿಸಿದ್ದೇನೆ. ಚೈತನ್ಯ ಮತ್ತು ಪ್ರಕಾಶ್ ಬೆಳವಾಡಿ ಇಬ್ಬರೂ ತುಂಬಾ ಸಹಾಯ ಮಾಡಿದ್ದಾರೆ. ಅವರಿಬ್ಬರಿಂದ ಸಾಕಷ್ಟು ಕಲಿತಿದ್ದೇನೆ. ಇದೊಂದೇ ಚಿತ್ರದಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿದ ಅನುಭವ ನನಗಾಗಿದೆ’ ಎನ್ನುತ್ತಾರೆ ಶರ್ಮಿಳಾ ಮಾಂಡ್ರೆ.
ಅಂದ ಹಾಗೆ, ಶರ್ಮಿಳಾ ಅಭಿನಯಿಸಿರುವ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. ಅವರು ಕಡೆಯದಾಗಿ ನಟಿಸಿದ ಚಿತ್ರ ಎಂದರೆ ಅದು ಮುಮ್ತಾಜ್. ಧರ್ಮ ಕೀರ್ತಿ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಶರ್ಮಿಳಾ ನಾಯಕಿಯಾಗಿದ್ದರು. ಈ ಚಿತ್ರ ಅಷ್ಟೇನೂ ಚೆನ್ನಾಗಿ ಓಡಲಿಲ್ಲ ಎನ್ನುವುದು ಒಂದು ಕಡೆಯಾದರೆ, ಈ ಚಿತ್ರದ ನಂತರ ಶರ್ಮಿಳಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೇ ತಿಂಗಳು ಆಕೆ ಬಿಡುಗಡೆಯಾದರೆ, ಇನ್ನೆರೆಡು ತಿಂಗಳಲ್ಲಿ ಅವರ ಅಭಿನಯದ ಮಾಸ್ ಲೀಡರ್ ಚಿತ್ರ ಸಹ ತೆರೆಕಾಣುತ್ತಿದೆ.