Advertisement

ಭಾರತ್‌ ಜೋಡೋ ಯಾತ್ರೆಗೆ ಹೊಣೆಗಾರಿಕೆ ಹಂಚಿಕೆ: ಡಿಕೆಶಿ

08:15 PM Sep 17, 2022 | Team Udayavani |

ಬೆಂಗಳೂರು: ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಗೆ ರಾಜ್ಯದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಕೆಲವು ಸಮಿತಿಗಳನ್ನು ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾತ್ರೆಯ ಪ್ರಚಾರದ ಜವಾಬ್ದಾರಿಯನ್ನು ರಾಮಲಿಂಗಾ ರೆಡ್ಡಿ ಅವರಿಗೆ, ಬಳ್ಳಾರಿ  ಸಮಾವೇಶದ ಜವಾಬ್ದಾರಿಯನ್ನು  ಎಂ.ಬಿ.ಪಾಟೀಲ್‌ ನೇತೃತ್ವದ ಸಮಿತಿಗೆ ವಹಿಸಲಾಗಿದೆ ಎಂದರು.

ಸಂಚಾರ ವ್ಯವಸ್ಥೆಯನ್ನು ರೇವಣ್ಣ ಅವರಿಗೆ, ಪ್ರತಿನಿತ್ಯದ ಸಭೆಗಳ ಜವಾಬ್ದಾರಿಯನ್ನು ಕೃಷ್ಣ ಭೈರೇಗೌಡ  ನೇತೃತ್ವದ ಸಮಿತಿಗೆ, ವಾಸ್ತವ್ಯ ವ್ಯವಸ್ಥೆಗೆ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಹಾಗೂ ಮೈಸೂರು ಚಾಮರಾಜನಗರ ಭಾಗದ ಉಸ್ತುವಾರಿಗೆ ಧ್ರುವನಾರಾಯಣ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ನಗರದ ಉಸ್ತುವಾರಿ ಮಹದೇವಪ್ಪ ಹಾಗೂ ಯತೀಂದ್ರ ಅವರಿಗೆ, ಮಂಡ್ಯ ಭಾಗದ ಉಸ್ತುವಾರಿ ಚಲುವರಾಯ ಸ್ವಾಮಿಗೆ, ತುಮಕೂರು ಭಾಗಕ್ಕೆ ಪರಮೇಶ್ವರ್‌, ಚಳ್ಳಕೆರೆ ಭಾಗದಲ್ಲಿ ಸಲೀಂ ಅಹ್ಮದ್‌ ಅವರು ಸ್ಥಳೀಯ ಶಾಸಕರ ಜತೆ ಜವಾಬ್ದಾರಿ ನಿಭಾಯಿಸುತ್ತಾರೆ. ರಾಯಚೂರು ಉಸ್ತುವಾರಿಯನ್ನು ಕಾರ್ಯಾಧ್ಯಕ್ಷರಾದ ಈಶ್ವರ್‌ ಖಂಡ್ರೆ ಅವರು ನೋಡಿಕೊಳ್ಳುತ್ತಾರೆ ಎಂದರು.

ಮಹಿಳೆಯರ ಸಂಘಟನೆಗೆ ಐದಾರು ತಂಡಗಳನ್ನು ರಚಿಸಲಾಗಿದೆ. ಗಾಂಧಿ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಿ.ಎಲ್‌. ಶಂಕರ್‌ ಅವರಿಗೆ ಉಸ್ತುವಾರಿ ನೀಡಲಾಗಿದೆ. ಉಳಿದ ಜವಾಬ್ದಾರಿಗಳನ್ನು ಬೇರೆ ಶಾಸಕರಿಗೆ ನೀಡಲಾಗುವುದು ಎಂದು ಹೇಳಿದರು.

Advertisement

ನಮ್ಮ ಶಾಸಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಟಾರ್ಗೆಟ್‌ ನೀಡಿದ್ದಾರೆ. ಶಾಸಕರು ಎಂದರೆ ಕೇವಲ ಮದುವೆ ಸಮಾರಂಭ, ಟೇಪ್‌ ಕಟ್‌ ಕಾರ್ಯಕ್ರಮಕ್ಕೆ ಹೋಗುವುದಲ್ಲ. ಮನೆ ಮನೆಗೆ ಹೋಗಿ ಬೂತ್‌ ಯಾತ್ರಾ ಮಾಡಬೇಕು ಎಂದರು.

ಎಲ್ಲವೂ ನನ್ನಿಂದಲೇ ಆಗದು..

ನಮ್ಮ ನಾಯಕರು ಸ್ಪಂದಿಸುತ್ತಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಎಲ್ಲರೂ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದು ಹೇಳಿದ್ದೇನೆ. ನನ್ನ ವೇಗ ಹೆಚ್ಚಾಗಿರಬಹುದು. ಕೆಲವರಿಗೆ ಅವರ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲವನ್ನೂ ನನ್ನಿಂದಲೇ ಮಾಡಲು ಆಗುವುದಿಲ್ಲ. ನಮ್ಮ ನಾಯಕರು ಅವರವರ ಕೆಲಸ ಮಾಡುತ್ತಿದ್ದಾರೆ. ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಹೋಗಬೇಕು, ಪ್ರಧಾನ ಕಾರ್ಯದರ್ಶಿಗಳು ಪ್ರತಿ ಪಂಚಾಯತ್‌ಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಸಂಘಟನೆ ಇಲ್ಲದೇ ಯಶಸ್ಸು ಸಿಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next