ಹುಬ್ಬಳ್ಳಿ: ಸಂತ ಶಿಶುನಾಳ ಶ್ರೀ ಶರೀಫ ಶಿವಯೋಗೀಶ್ವರ ಸದ್ಭಕ್ತ ಮಂಡಳಿಯಿಂದ ಇಲ್ಲಿನ ಘಂಟಿಕೇರಿ ಬಸವಣ್ಣ ದೇವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಶಿಶುನಾಳ ಶರೀಫರ 198ನೇ ಜಯಂತ್ಯುತ್ಸವ ಹಾಗೂ 128ನೇ ಸ್ಮರಣಾ ದಿನ ಆಚರಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ| ಕೆ.ಎಸ್.ಕೌಜಲಗಿ ಮಾತನಾಡಿ, ಸಂತ ಶಿಶುನಾಳ ಶರೀಫರನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಹುಬ್ಬಳ್ಳಿಗೆ ಸಲ್ಲುತ್ತದೆ. ಶರೀಫರನ್ನು ಕೇವಲ ಅವರ ಲೀಲೆ ಹಾಗೂ ಹಾಡುಗಳ ಮೂಲಕ ಮಾತ್ರ ಗುರುತಿಸುತ್ತಾರೆ. ಹಲವು ಚಿತ್ರಗಳು, ಪದಗಳ ಮೂಲಕ ಅವರನ್ನು ಕಾಣಲು ಸಾಧ್ಯ ಎಂದರು.
ಅಜ್ಞಾನ ನಮ್ಮ ಜೀವನ ಹಾಳು ಮಾಡುತ್ತಿದ್ದು, ಪ್ರತಿಯೊಬ್ಬರು ಉತ್ತಮ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು. ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಅದೆಷ್ಟೋ ಮಕ್ಕಳು ಪಾಲಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿರುವುದು ಖೇದಕರ ಸಂಗತಿ.
ಪಾಲಕರು ಮಕ್ಕಳಿಗೆ ಆರಂಭದಿಂದಲೇ ಉತ್ತಮ ಸಂಸ್ಕಾರ, ಸಂಪ್ರದಾಯ ಹೇಳಿ ಕೊಡಬೇಕು ಎಂದರು. ವೀರಣ್ಣ ಶೆಟ್ಟರ ಮಾತನಾಡಿ, ಸಂತರು, ಮಹಾತ್ಮರು ಬೆಳೆದ ನಾಡಿನಲ್ಲಿ ಜನ್ಮತಾಳಿದ ನಾವೆಲ್ಲರೂ ಪುಣ್ಯವಂತರು. ಸಂತ ಶಿಶುನಾಳ ಶರೀಫರು, ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅಂತಹವರ ಸೇವೆ ಮಾಡುವುದು ನಮ್ಮೆಲ್ಲರ ಪುಣ್ಯ ಎಂದರು. ಶೇಖಣ್ಣ ಬೆಂಡಿಗೇರಿ ಸೇರಿದಂತೆ ಇನ್ನಿತರರು ಮಾತನಾಡಿದರು.
ಮಜೇಥಿಯಾ ಫೌಂಡೇಶನ್‌ನ ಚೇರನ್ ಜಿತೇಂದ್ರ ಮಜೇಥಿಯಾ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಸಿ.ಎನ್.ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಕಾಶ ಕಂಬಳಿ ಹಾಗೂ ಸಂಗಡಿಗರು ಶರೀಫರ ತತ್ವಪದಗಳನ್ನು ಪ್ರಸ್ತುತ ಪಡಿಸಿದರು. ಚನ್ನಬಸಪ್ಪ ಕೊಣ್ಣೂರ, ಮಲ್ಲಿಕಾರ್ಜುನ ನರೇಂದ್ರಮಠ, ಮಲ್ಲೇಶ ಶ್ಯಾವಿ, ಕಾಶಿ ಖೋಡೆ ಮೊದಲಾದವರು ಇದ್ದರು.