Advertisement

ಶರಿಯಾ ಕಾನೂನು ಅಸ್ತಿತ್ವಕ್ಕೆ!

12:05 AM Aug 08, 2021 | Team Udayavani |

ಕಾಬೂಲ್‌: ಒಂದೆಡೆ ತಾಲಿಬಾನ್‌ ಉಗ್ರರನ್ನು ಹತ್ತಿಕ್ಕಲು ಅಫ್ಘಾನಿಸ್ಥಾನದ ಸೇನಾಪಡೆ ನಡೆಸುತ್ತಿರುವ ಎಲ್ಲ ಪ್ರಯತ್ನಗಳೂ ವಿಫ‌ಲವಾಗುತ್ತಿವೆ. ಮತ್ತೂಂದೆಡೆ ತನ್ನ ವಶಕ್ಕೆ ಬಂದಿರುವ ಪ್ರದೇಶಗಳಲ್ಲಿ ಹಳೇ ಚಾಳಿ ಮುಂದುವರಿಸಿರುವ ತಾಲಿಬಾನ್‌, ಅಲ್ಲೆಲ್ಲ ಶರಿಯಾ ಕಾನೂನು ಜಾರಿ ಮಾಡಲಾರಂಭಿಸಿದೆ.

Advertisement

ಬದಖ್‌ಶಾನ್‌, ತಖಾರ್‌ ಮತ್ತು ಘಝಿ° ಪ್ರಾಂತ್ಯದಲ್ಲಿ ಶರಿಯಾ ಆಡಳಿತ ಜಾರಿಗೆ ಬಂದಿದೆ. ಉಗ್ರರು ಮನೆ ಮನೆ ಮೇಲೆ ದಾಳಿ ನಡೆಸಿ ಹಣ, ಸಂಪತ್ತು ಲೂಟಿ ಮಾಡಲು ಆರಂಭಿಸಿದ್ದಾರೆ. ಭದ್ರತಾ ಪಡೆಗಳ ಕುಟುಂಬ ಸದಸ್ಯರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ, 12 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಮತ್ತು ವಿಧವೆಯರನ್ನು ತಾಲಿಬಾನ್‌ ಉಗ್ರರೇ ಒತ್ತಾಯಪೂರ್ವಕವಾಗಿ ವಿವಾಹವಾಗುತ್ತಿದ್ದಾರೆ. ಅಲ್‌ಕಾಯಿದಾ, ಲಷ್ಕರ್‌, ಜೈಶ್‌, ಈಸ್ಟ್‌ ತುರ್ಕಿಸ್ಥಾನ್‌ ಇಸ್ಲಾಮಿಕ್‌ ಮೂವ್‌ಮೆಂಟ್‌, ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಉಜ್ಬೇಕಿಸ್ಥಾನ್‌ ಸೇರಿದಂತೆ ವಿದೇಶಿ ಉಗ್ರರು ಅಫ್ಘಾನ್‌ ಪ್ರವೇಶಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಬಲ್ಖ್ ಜಿಲ್ಲೆಯಲ್ಲಿ  ಮಹಿಳೆಯೊಬ್ಬರನ್ನು, ಹತ್ಯೆಗೈಯ್ಯಲಾಗಿದೆ.

ಶುಕ್ರವಾರದವರೆಗೆ 218 ಜಿಲ್ಲೆಗಳು ತಾಲಿಬಾನ್‌ ನಿಯಂತ್ರಣಕ್ಕೆ ಬಂದಿದ್ದರೆ, ಸರಕಾರದ ಹತೋಟಿಯಲ್ಲಿ 120 ಜಿಲ್ಲೆಗಳು ಇವೆ. ಉಳಿದ 99 ಜಿಲ್ಲೆಗಳಿಗಾಗಿ ಹೋರಾಟ ನಡೆಯುತ್ತಿದೆ.

ಮತ್ತೂಂದು ಪ್ರಾಂತ್ಯ ವಶಕ್ಕೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶನಿವಾರ ಅಫ್ಘಾನ್‌ನ ಮತ್ತೂಂದು ಪ್ರಾಂತೀಯ ರಾಜಧಾನಿಯನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಂಡಿದೆ. ಜಾವ್‌ಝಾನ್‌ನ ಶೆಬರ್‌ಘಾನ್‌ ನಗರವು ಉಗ್ರರ ವಶಕ್ಕೆ ಬಂದಿದ್ದು, ಸರಕಾರಿ ಅಧಿಕಾರಿಗಳು ಹಾಗೂ ಸೈನಿಕರು ಅಲ್ಲಿಂದ ಹಿಂದೆ ಸರಿದಿದ್ದಾರೆ. ಒಂದು ಪ್ರಾಂತೀಯ ರಾಜಧಾನಿಯಲ್ಲಿ ಉಗ್ರರು ಹಿಡಿತ ಸಾಧಿಸಿದ್ದರು.

ವಾಪಸಾಗಲು ಸೂಚನೆ: ಅಫ್ಘಾನ್‌ನಲ್ಲಿರುವ ಎಲ್ಲರೂ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಅಮೆರಿಕವು ತನ್ನ ನಾಗರಿಕರಿಗೆ ಸೂಚಿಸಿದೆ. ಭದ್ರತಾ ಪರಿಸ್ಥಿತಿ ನೋಡಿದರೆ, ನಿಮಗೆ ಸಹಾಯ ಮಾಡಲು ನಮ್ಮಿಂದ ಸಾಧ್ಯವಾಗದು. ಹಾಗಾಗಿ ಕೂಡಲೇ ಅಲ್ಲಿಂದ ವಾಪಸಾಗಿ ಎಂದೂ ತಿಳಿಸಿದೆ.

Advertisement

ಪಾಕ್‌ ಡಬಲ್‌ ಗೇಮ್‌ :  ತಾಲಿಬಾನ್‌ ಉಗ್ರರಿಗೆ ಪಾಕಿಸ್ಥಾನ ನೀಡುತ್ತಿರುವ ಬೆಂಬಲವನ್ನು ವಿಶ್ವಸಂಸ್ಥೆಯ ಅಫ್ಘಾನ್‌ ರಾಯಭಾರಿಯು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ಪಾಕಿಸ್ಥಾನವು ತಾಲಿಬಾನಿಗರಿಗೆ ಸ್ವರ್ಗವಾಗಿದೆ, ಅವರಿಗೆ ಬೇಕಾದ ವಸ್ತುಗಳು, ಶಸ್ತ್ರಾಸ್ತ್ರಗಳನ್ನೂ ಪಾಕ್‌ ಪೂರೈಸುತ್ತಿದೆ ಎಂದು ಗುಲಾಂ ಎಂ. ಇಸಾಕ್‌ಝಾಯ್‌ ಆರೋಪಿಸಿದ್ದಾರೆ. ಗಾಯಗೊಂಡ ಉಗ್ರರಿಗೆ ಪಾಕ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಧಿ ಸಂಗ್ರಹ ಅಭಿಯಾನ ಆಯೋಜಿಸಲಾಗುತ್ತಿದೆ. ಇದು 1988ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧ ನಿಯಮದ ಉಲ್ಲಂಘನೆ ಮಾತ್ರವಲ್ಲ, ನಂಬಿಕೆ ದ್ರೋಹವೂ ಆಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಧ್ವಜ ಮರುಸ್ಥಾಪನೆ :

ಅಫ್ಘಾನಿಸ್ಥಾನದ ಪಕ್ತಿಯಾ ಪ್ರಾಂತ್ಯದ ಗುರುದ್ವಾರದಲ್ಲಿದ್ದ ಸಿಕ್ಖ್ ಧಾರ್ಮಿಕ ಧ್ವಜ ನಿಶಾನ್‌ ಸಾಹಿಬ್‌ ಅನ್ನು ಶನಿವಾರ ತಾಲಿಬಾನ್‌ ಉಗ್ರರೇ ಮರುಸ್ಥಾಪನೆ ಮಾಡಿದ್ದಾರೆ. ಶುಕ್ರವಾರವಷ್ಟೇ ಆ ಧ್ವಜವನ್ನು ಉಗ್ರರು ತೆರವುಗೊಳಿಸಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಗುರುದ್ವಾರಕ್ಕೆ ಭೇಟಿ ನೀಡಿದ ತಾಲಿಬಾನ್‌ ಸದಸ್ಯರು, ಧ್ವಜವನ್ನು ಮರು ಸ್ಥಾಪಿಸಿದ್ದು, ಸಂಪ್ರದಾಯದ ಪ್ರಕಾರ ಗುರುದ್ವಾರದ ಕಾರ್ಯನಿರ್ವಹಣೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ಭದ್ರತಾ ಪರಿಸ್ಥಿತಿ ದಿನಕಳೆದಂತೆ ಹದಗೆಡುತ್ತಿದ್ದು, ಇದೊಂದು ಗಂಭೀರ ವಿಚಾರ. ಸಮಾಜದ ಎಲ್ಲ ವರ್ಗಗಳ ಹಕ್ಕು ಮತ್ತು ಹಿತಾಸಕ್ತಿಯನ್ನು ರಕ್ಷಿಸುವಂತೆ ಅಫ್ಘಾನ್‌ನಲ್ಲಿ ಸ್ಥಿರ, ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕಿದೆ.-ಎಸ್‌.ಜೈಶಂಕರ್‌, ವಿದೇಶಾಂಗ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next