ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಕಟಿಸಿದ ಹೊಸ ನಿಯಮದಿಂದಾಗಿ ಟಿಸಿಎಸ್, ಎಚ್‌ಯುಎಲ್ ಸೇರಿದಂತೆ 100 ಕ್ಕೂ ಹೆಚ್ಚು ಕಂಪನಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಕಂಪನಿಗಳು ಸಾರ್ವಜನಿಕರಿಂದ ಹೊಂದಬೇಕಾದ ಹೂಡಿಕೆಯ ಪ್ರಮಾಣವನ್ನು ಶೇ. 25 ರಿಂದ ಶೇ. 35 ಕ್ಕೆ ಏರಿಕೆ ಮಾಡಲು ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದು, ಉದ್ಯಮ ವಲಯವು ಇದನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದೆ.
ಸರ್ಕಾರದ ನಿರ್ಧಾರದಿಂದ 3.90 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ವ್ಯಾಪಕ ಪ್ರಮಾಣದ ಷೇರು ಹರಿದಾಡಲಿದೆ. ಅಲ್ಲದೆ, ಹಲವು ಬಹುರಾಷ್ಟ್ರೀಯ ಕಂಪನಿಗಳು ಷೇರು ಮಾರುಕಟ್ಟೆಯಿಂದ ವಿಮುಖವಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಹೂಡಿಕೆ ಪ್ರಮಾಣ ಏರಿಕೆ ಮಾಡಲು ಅಗತ್ಯ ಕಾಲಾವಧಿಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿಲ್ಲ.
2010ರಲ್ಲಿ ಶೇ. 25 ಕ್ಕೆ ಹೂಡಿಕೆ ಪ್ರಮಾಣ ಏರಿಕೆ ಮಾಡಲು ನಿರ್ಧರಿಸಿದಾಗ ಕಂಪನಿಗಳಿಗೆ ಮೂರು ವರ್ಷಗಳ ಕಾಲಾವಕಾಶ ಒದಗಿಸಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ನೂರಾರು ಕಂಪನಿಗಳು ಸದ್ಯ ಶೇ. 35 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಂಡವಾಳವನ್ನು ಷೇರುಗಳ ಮೂಲಕ ಸಂಗ್ರಹಿಸಿವೆ. ಆದರೆ ಸರ್ಕಾರದ ಈ ನಿರ್ಧಾರ ಹಲವು ಕಂಪನಿಗಳ ಮಾಲೀಕತ್ವದ ವಿಧಾನದ ಮೇಲೆ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಇದರಿಂದಾಗಿ ಷೇರು ಮಾರುಕಟ್ಟೆಯ ಮೌಲ್ಯವೂ ಇದೇ ವೇಳೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಎಫ್ಡಿಐ ನಿಯಮ ಸಡಿಲ: ವಿದೇಶಿ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾಧ್ಯಮ, ವಿಮಾನಯಾನ, ವಿಮೆ ಮತ್ತು ಸಿಂಗಲ್ ಬ್ರಾಂಡ್ ರಿಟೇಲ್ ವಲಯದಲ್ಲಿ ವಿದೇಶಿ ಹೂಡಿಕೆ ಮಿತಿಯನ್ನು ಏರಿಕೆ ಮಾಡಲಾಗಿದೆ. ವಿಮೆ ಕ್ಷೇತ್ರದಲ್ಲಿ ವಿಮೆ ಮಧ್ಯವರ್ತಿಗಳಿಗೆ ಶೇ. 100 ವಿದೇಶಿ ಹೂಡಿಕೆ ಅನುಮತಿ ನೀಡಲಾಗುತ್ತದೆ. ಸದ್ಯ ವಿಮೆ ವಲಯದಲ್ಲಿ ವಿಮೆ ಬ್ರೋಕಿಂಗ್, ವಿಮೆ ಕಂಪನಿಗಳಿಗೆ ಶೇ. 49ರಷ್ಟು ವಿದೇಶಿ ಹೂಡಿಕೆ ಅನುಮತಿ ಇದೆ. ಈ ನಿಯಮ ಹಾಗೆಯೇ ಮುಂದುವರಿಯಲಿದ್ದು, ವಿಮೆ ಮಧ್ಯವರ್ತಿ ಕಂಪನಿಗಳಿಗೆ ಮಾತ್ರವೇ ಶೇ. 100 ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ.
ಇದರೊಂದಿಗೆ ದಿನಪತ್ರಿಕೆ ಹಾಗೂ ನಿಯಕಾಲಿಕೆ ಕಂಪನಿಗಳಲ್ಲಿ ಶೇ. 26 ವಿದೇಶಿ ಹೂಡಿಕೆಗೆ ಅನುಮತಿ ನಿಡಲಾಗಿದೆ. ಅಷ್ಟೇ ಅಲ್ಲ, ವಿದೇಶದ ನಿಯತಕಾಲಿಕೆಗಳ ಭಾರತೀಯ ಆವೃತ್ತಿಯ ಪ್ರಕಟಣೆಯಲ್ಲೂ ಈ ನಿಯಮ ಅನ್ವಯಿಸಲಿದೆ. ವಿದೇಶ ಮೂಲದ ಬೃಹತ್ ಕಂಪನಿಗಳಿಗೆ ಒಂದು ಸಿಹಿ ಸುದ್ದಿ ನೀಡಿರುವ ಸರ್ಕಾರ, ಸಿಂಗಲ್ ಬ್ರಾಂಡ್ ರಿಟೇಲ್ ಮಳಿಗೆಗಳು ಶೇ 30 ರಷ್ಟು ದೇಶೀಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ವಿನಾಯಿತಿ ನೀಡಿದೆ.