ಮುಂಬೈ:ಕಳೆದ ಎರಡು ಮೂರು ದಿನಗಳಿಂದ ಭಾರೀ ಕುಸಿತ ಕಾಣುತ್ತಿದ್ದ ಮುಂಬೈ ಶೇರುಪೇಟೆ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶೀಯ ಕಾರ್ಪೋರೇಟ್ ಕಂಪನಿಗಳ ತೆರಿಗೆಯನ್ನು ಇಳಿಕೆ ಮಾಡಿರುವುದಾಗಿ ಘೋಷಿಸಿದ್ದರಿಂದ ಚಿನಿವಾರ ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 2,200 ಅಂಕಗಳ ಭಾರೀ ಏರಿಕೆಯೊಂದಿಗೆ 38,378.47 ಅಂಕಗಳ ವಹಿವಾಟು ನಡೆಸಿದೆ.
ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ (ಎನ್ ಎಸ್ ಇ)677.1 ಅಂಕಗಳ ಏರಿಕೆಯೊಂದಿಗೆ 11,381.90 ಅಂಕಗಳ ವಹಿವಾಟು ಕಂಡಿದೆ. ಸೆನ್ಸೆಕ್ಸ್ ಸೂಚ್ಯಂಕ ಭಾರೀ ಏರಿಕೆಯಿಂದ ದೇಶೀಯ ಹೂಡಿಕೆದಾರರಿಗೆ 2.11ಲಕ್ಷ ಕೋಟಿ ರೂಪಾಯಿಯಷ್ಟು ಏರಿಕೆಯಾದಂತಾಗಿದೆ.
ಆರ್ಥಿಕಾಭಿವೃದ್ಧಿಯ ಹಿನ್ನೆಲೆಯಲ್ಲಿ ಜಿಎಸ್ ಟಿ ಮಂಡಳಿ ಸಭೆ ಬಳಿಕ ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶೀಯ ಕಾರ್ಪೋರೇಟ್ ಸಂಸ್ಥೆಗಳ ತೆರಿಗೆಯನ್ನು ಶೇ.22ಕ್ಕೆ ಇಳಿಸಲಾಗಿದ್ದು, ನೂತನ ಕಾರ್ಪೋರೇಟ್ ಸಂಸ್ಥೆಗಳಿಗೆ ಶೇ.15ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದರು.
ಈ ಘೋಷಣೆಯ ಬೆನ್ನಲ್ಲೇ ದೇಶೀಯ ಶೇರುಮಾರುಕಟ್ಟೆ ವಹಿವಾಟು ಭರ್ಜರಿಯಾಗಿ ನಡೆಯುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದರಿಂದಾಗಿ ಮಾರುಕಟ್ಟೆ ಶೇರುವಾಹಿಟಿಗೆ ಭರ್ಜರಿ ಬಲ ನೀಡಿದಂತಾಗಿದೆ ಎಂದು ಆರ್ಥಿಕ ವಲಯ ವಿಶ್ಲೇಷಿಸಿದೆ.
ಮುಂಬೈ ಶೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಏರಿಕೆಯಾಗಿದ್ದರಿಂದ ಟಾಟಾ ಸ್ಟೀಲ್, ಇಂಡಿಯಾಬುಲ್ ಹೌಸಿಂಗ್ ಫೈನಾನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಎಚೇರ್ ಮೋಟಾರ್ಸ್ ಶೇರುಗಳ ಮೌಲ್ಯ ಶೇ.5.45ಕ್ಕೆ ಏರಿಕೆಯಾಗಿರುವುದಾಗಿ ವರದಿ ತಿಳಿಸಿದೆ.