Advertisement
ಶೇರು ಮಾರುಕಟ್ಟೆಯಲ್ಲಿ ಯಾವ ಯಾವ ಶೇರಿನ ಬೆಲೆ ಎಷ್ಟೆಷ್ಟು? ಆಯಾ ಶೇರಿನ ಕಂಪನಿಯ ಹಿನ್ನೆಲೆ ಏನು? ಇತ್ಯಾದಿ ಮಾಹಿತಿಯನ್ನು ಶೇರುಪೇಟೆಯಲ್ಲಿ ಹೂಡಿಕೆ ಮಾಡುವಾತ ಮುಂಚಿತವಾಗಿ ತಿಳಿದಿರಬೇಕಾಗುತ್ತದೆ. ಆದರೆ ಜನಸಾಮಾನ್ಯರಿಗೆ ಅಷ್ಟೊಂದು ಆಳವಾಗಿ ಅಧ್ಯಯನ ನಡೆಸುವ ಶ್ರಮವನ್ನು ತಪ್ಪಿಸಿದ್ದು ಸ್ಟಾಕ್‌ಬ್ರೋಕರ್‌ಗಳು. ಶೇರುಪೇಟೆಯಲ್ಲಿ ಹಣ ಹೂಡಲು ಇಚ್ಛಿಸುವವರಿಗೆ ಸ್ಟಾಕ್‌ಬ್ರೋಕರ್‌ಗಳು ಮಾರ್ಗದರ್ಶನ ಮಾಡುತ್ತಾರೆ. ಎಲ್ಲೆಲ್ಲಿ ಹಣ ಹೂಡಿದರೆ ಪ್ರಯೋಜನ ಹೆಚ್ಚು ಎಂಬುದನ್ನು ಅವರು ತಿಳಿಸಿಕೊಡುವುದಲ್ಲದೆ, ಗಿರಾಕಿಗಳ ಪರವಾಗಿ ಹೂಡಿಕೆಯನ್ನೂ ಮಾಡುತ್ತಾರೆ. ಈ ಕೆಲಸ ಮಾಡುವ ದೊಡ್ಡ ದೊಡ್ಡ ಸ್ಟಾಕ್‌ಬ್ರೋಕಿಂಗ್ ಸಂಸ್ಥೆಗಳೇ ಇವೆ. ಶ್ರೀಮಂತರು ತಮ್ಮ ಬಳಿ ಇರುವ ಹಣವನ್ನು ಸ್ಟಾಕ್‌ಬ್ರೋಕಿಂಗ್ ಸಂಸ್ಥೆಗಳ ಮುಖಾಂತರ ಶೇರುಪೇಟೆಯಲ್ಲಿ ಹೂಡುತ್ತಾರೆ. ಮತ್ತು ಕಾಲ ಕಾಲಕ್ಕೆ ಅವರ ಶೇರುಗಳ ಪ್ರಗತಿ ಹೇಗಿದೆ ಎಂಬುದರ ವರದಿಯನ್ನು ಸ್ಟಾಕ್‌ಬ್ರೋಕಿಂಗ್ ಸಂಸ್ಥೆಗಳು ಗಿರಾಕಿಗಳಿಗೆ (ಕ್ಲೈಂಟ್) ಒದಗಿಸುತ್ತದೆ.
ಕಾರ್ವಿಯಂಥ ದೊಡ್ಡ ಸ್ಟಾಕ್‌ಬ್ರೋಕರ್‌ಗಳು ಎನ್‌ಎಸ್‌ಇ ಮತ್ತು ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್ ಎರಡರಲ್ಲೂ ಆನ್‌ಲೈನ್ ಟ್ರೇಡಿಂಗ್‌ಗೆ ಅವಕಾಶವನ್ನೂ ಕಲ್ಪಿಸಿಕೊಡುತ್ತವೆ. ಈಕ್ವಿಟಿ, ಮ್ಯೂಚುವಲ್ ಫಂಡ್ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮ ಗಿರಾಕಿಗಳು ಪಾಲ್ಗೊಳ್ಳಲು ವೇದಿಕೆಯನ್ನು ರೂಪಿಸುತ್ತದೆ. ಶೇರುಪೇಟೆಯಲ್ಲಿ ಹೂಡಿಕೆ ನಡೆಸುವವರು ಮೊದಲು ಬ್ಯಾಂಕಿನಲ್ಲಿ ಡಿಮ್ಯಾಟ್ ಖಾತೆ ತೆರೆಯಬೇಕು ಎಂದು ಬಹುತೇಕರಿಗೆ ಗೊತ್ತಿರಬಹುದು. ಕೆಲ ಸಂದರ್ಭಗಳಲ್ಲಿ ಹೂಡಿಕೆದಾರರು, ಸ್ಟಾಕ್‌ಬ್ರೋಕರ್‌ಗಳಿಗೆ ಪವರ್ ಆಫ್ ಅಟಾರ್ನಿ(ಸಂಪೂರ್ಣ ಅಧಿಕಾರ)ಯನ್ನು ನೀಡುತ್ತಾರೆ. ಅದರಿಂದ ಆಯಾ ಸ್ಟಾಕ್‌ಬ್ರೋಕಿಂಗ್ ಸಂಸ್ಥೆಗಳು ಹೂಡಿಕೆದಾರನ ಪರವಾಗಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದಿಷ್ಟು ಪೀಠಿಕೆ ಏಕೆ ಎಂದರೆ, ಸರ್ಕಾರಿ ಸಂಸ್ಥೆSEBI(ಸೆಕ್ಯುರಿಟಿ ಅÂಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸ್ಟಾಕ್ ಬ್ರೋಕಿಂಗ್ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸಲು ಮುಂದಾಗಿರುವುದು. ಅದಕ್ಕೆ ಕಾರಣ ಕಾರ್ವಿ ಎನ್ನುವ ಸ್ಟಾಕ್ ಬ್ರೋಕಿಂಗ್ ಸಂಸ್ಥೆಯೊಂದು ತನ್ನ ಗಿರಾಕಿಗಳ ಶೇರು ಮತ್ತಿತರ ಭದ್ರತೆಗಳನ್ನು ಸ್ವಂತ ಉದ್ದೇಶಗಳಿಗೆ ಬಳಸಿಕೊಂಡಿದ್ದು. ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಇದು.
Related Articles
ಸ್ಟಾಕ್‌ಬ್ರೋಕಿಂಗ್ ಸಂಸ್ಥೆ ಕಾರ್ವಿ ತನ್ನ ಗಿರಾಕಿಗಳ ಶೇರುಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿತು. ನಂತರ ಆ ಶೇರುಗಳನ್ನು ಆಧಾರವಾಗಿಟ್ಟುಕೊಂಡು ಸಾವಿರ ಕೋಟಿಗಳಷ್ಟು ಹಣ ಪಡೆದಿತ್ತು. ಗಿರಾಕಿಗಳಿಗೂ ತಿಳಿಸದೆ, ಖಉಆಐಗೂ ತಿಳಿಸದೆ ಈ ಕೃತ್ಯವನ್ನು ಎಸಗಿದ್ದರಿಂದ ಮಾರುಕಟ್ಟೆಯ ಪರಿಣತರು ಅಚ್ಚರಿಗೊಳಗಾಗಿದ್ದಾರೆ. ಏಕೆಂದರೆ ಯಾರಿಗೆ ಗೊತ್ತಾಗದೇ ಹೋದರೂ ಖಉಆಐಗೆ ಗೊತ್ತಾಗಬೇಕಿತ್ತು. ಹಾಗಾಗಿ, ರಂಗೋಲಿ ಕೆಳಗೆ ತೂರುವ ಅದ್ಯಾವ ಮಾರ್ಗದಿಂದ ಈ ದುರುಪಯೋಗ ನಡೆದಿದೆ ಎನ್ನುವುದೇ ಅಚ್ಚರಿಗೆ ಕಾರಣ. ಅಂದಹಾಗೆ, ಆ ಸಂಸ್ಥೆಯ ಮುಖಾಂತರ ಶೇರುಪೇಟೆಯಲ್ಲಿ ಹಣ ಹೂಡಿರುವವರ (ಗಿರಾಕಿ) ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ. ಇದೀಗ ಎಷ್ಟೆಲ್ಲಾ ಖಾತೆಗಳನ್ನು, ಎಷ್ಟೆಷ್ಟು ಬಾರಿ ಕಾರ್ವಿ ದುರುಪಯೋಗ ಪಡಿಸಿಕೊಂಡಿದೆ ಎಂಬುದರ ಮಾಹಿತಿ ಹೊರಬರಬೇಕಷ್ಟೆ.
Advertisement
ಹೊಸ ನಿಯಮಾವಳಿ ಏನು?ಸ್ಟಾಕ್‌ಬ್ರೋಕರ್‌ಗಳು ಗಿರಾಕಿಗಳ ಶೇರುಗಳನ್ನು, ಭದ್ರತಾ ಠೇವಣಿಯನ್ನು ಬಳಸಿಕೊಳ್ಳದಿರುವಂತೆ ಮಾಡಲು SEBI ಚಿಂತನೆ ನಡೆಸಿದೆ. ಅದರ ಪರಿಣಾಮವಾಗಿ ಹೊಸ ನಿಯಮಾವಳಿಯನ್ನೂ ಅದು ರೂಪಿಸಿದೆ. ಅದೇ ಈಗ ಮಾರುಕಟ್ಟೆಯಲ್ಲಿ ಗಲಿಬಿಲಿಗೆ ಕಾರಣವಾಗಿರುವುದು. ಹೊಸ ನಿಯಮಾವಳಿ ಪ್ರಕಾರ ಸ್ಟಾಕ್‌ಬ್ರೋಕರ್‌ಗಳ ಖಾತೆ ಮತ್ತು ಗಿರಾಕಿಗಳ ಖಾತೆ ಎರಡನ್ನೂ ಪ್ರತ್ಯೇಕವಾಗಿ ತೋರಿಸುವುದು (ಶೇರ್ ಸೆಪರೇಷನ್). ಇದರಿಂದ ಯಾವುದೇ ಗಿರಾಕಿಗಳ ಶೇರುಗಳನ್ನು ಬ್ರೋಕರ್ ಸಂಸ್ಥೆ ತನ್ನದೆಂದು ತೋರಿಸಿಕೊಳ್ಳಲು ಆಗುವುದಿಲ್ಲ. ಆಗ ದುರುಪಯೋಗ ತಪ್ಪುತ್ತದೆ ಎನ್ನುವುದು SEBI ಲೆಕ್ಕಾಚಾರ. ಆದರೆ ವಿಪರ್ಯಾಸ ಎಂದರೆ ಇದೇ ದುರುಪಯೋಗದಿಂದ ಅನೇಕ ವೇಳೆ, ಅನೇಕ ಗಿರಾಕಿಗಳಿಗೆ ಸಹಾಯವೂ ಆಗಿದೆ ಎನ್ನುವುದು. ಗಿರಾಕಿಗಳು ಪೂರ್ತಿ ಹಣ ಪಾವತಿಸದೇ ಇದ್ದ ಪಕ್ಷದಲ್ಲಿ ಆ ಹಣವನ್ನು ಬ್ಯಾಲೆನ್ಸ್ ಮಾಡಲು ಇತರ ಗಿರಾಕಿಗಳ ಠೇವಣಿ ಬಳಸಿಕೊಳ್ಳುವುದು, ನಂತರ ಪಾವತಿಸದ ಗಿರಾಕಿಯಿಂದ ಹಣ ಹಿಂಪಡೆದು ಅದನ್ನು ಯಾರ ಖಾತೆಯಿಂದ ಪಡೆಯಲಾಗಿತ್ತೋ ಅವರಿಗೆ ಮರಳಿಸುವುದು ಇತ್ಯಾದಿ. ಹೊಸ ನಿಯಮವಳಿಯಿಂದ ಖಾತೆಯ ದುರ್ಬಳಕೆ ತಪ್ಪುತ್ತದೆಯಾದರೂ ಅದರಿಂದ ಅನನುಕೂಲಗಳೂ ಇವೆ. ಹೂಡಿಕೆದಾರರು ಹಣ ಕಳೆದುಕೊಳ್ಳುವರೇ?
ಸ್ಟಾಕ್ ಬ್ರೋಕಿಂಗ್ ಸಂಸ್ಥೆ ತನ್ನ ಗಿರಾಕಿಗಳ ಶೇರುಗಳನ್ನು ಸ್ವಂತದ್ದೆಂದು ತೋರಿಸಿಕೊಂಡು ಪಡೆದಿರುವ ಹಣದ ಮೊತ್ತ ಶೇರುಗಳ ಮೌಲ್ಯಕ್ಕಿಂತಲೂ ಹೆಚ್ಚಿನದ್ದು. ಹೀಗಾಗಿ ಹೂಡಿಕೆದಾರರಲ್ಲಿ ಆತಂಕ ಸಹಜ. ಆದರೆ ಸರ್ಕಾರಿ ಮೂಲಗಳು ಕಾರ್ವಿಯ ಗಿರಾಕಿಗಳು ಹಣ ಕಳೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಒಂದು ವೇಳೆ ಹೂಡಿಕೆದಾರರಿಗೆ ಹಣ ಮರಳಿಸಲು ಕಾರ್ವಿಯ ಖಾತೆಯಲ್ಲಿ ದುಡ್ಡಿಲ್ಲದೇ ಹೋದರೆ “ಎನ್‌ಎಸ್‌ಡಿಎಲ್ ಇನ್ಷೊರೆನ್ಸ್’ ಮಾಡಿಸಿರುವುದರಿಂದ, ಅಲ್ಲದೆ ಐಪಿಎಫ್ (ಇನ್ವೆಸ್ಟರ್ ಪ್ರೊಟೆಕ್ಷನ್ ಫಂಡ್- ಹೂಡಿಕೆದಾರರ ರಕ್ಷಣಾ ನಿಧಿ)ನ ಭದ್ರತೆ ಕೂಡಾ ಇರುವುದರಿಂದ, ಹೂಡಿಕೆದಾರರ ಆತಂಕ ಅನಗತ್ಯ ಎನ್ನುತ್ತಿದ್ದಾರೆ ಮಾರುಕಟ್ಟೆಯ ಪಂಡಿತರು. – ಹವನ