ಮುಂಬೈ: ಸತತ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಮಂಗಳವಾರ(ಫೆ.23, 2021)ದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಎಲ್ ಆ್ಯಂಡ್ ಟಿ ಷೇರುಗಳು ಲಾಭ ಗಳಿಸಿವೆ.
ಮುಂಬಯಿ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಬಿಎಸ್ ಇ ಸಂವೇದಿ ಸೂಚ್ಯಂಕ 260.39 ಅಂಕಗಳೊಂದಿಗೆ 50,004.71ರ ಗಡಿ ತಲುಪಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 81.50 ಅಂಕಗಳ ಏರಿಕೆಯೊಂದಿಗೆ 14,757.20 ವಹಿವಾಟು ನಡೆಸಿದೆ.
ಸಂವೇದಿ ಸೂಚ್ಯಂಕ ಏರಿಕೆಯಿಂದ ಒಎನ್ ಜಿಸಿ, ಎಲ್ ಆ್ಯಂಡ್ ಟಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇ.6ರಷ್ಟು ಲಾಭ ಗಳಿಸಿದೆ.
ಮತ್ತೊಂದೆಡೆ ಏಷ್ಯನ್ ಪೈಂಟ್ಸ್, ಕೋಟಕ್ ಬ್ಯಾಂಕ್, ಬಜಾಜ್ ಆಟೋ, ಮಾರುತಿ ಮತ್ತು ಎಚ್ ಡಿಎಫ್ ಸಿ ಷೇರುಗಳು ಹೆಚ್ಚು ವಹಿವಾಟು ನಡೆಸದೇ ನಷ್ಟ ಅನುಭವಿಸಿದೆ.
ಕೋವಿಡ್ ಸೋಂಕಿನ ಭೀತಿ ಹೆಚ್ಚಳದ ಹಿನ್ನಲೆಯಲ್ಲಿ ಷೇರುಪೇಟೆ ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿದ್ದ ಪರಿಣಾಮ ಸತತ 5ನೇ ದಿನವಾದ ಸೋಮವಾರ(ಫೆ.22) ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,145.44 ಅಂಕಗಳ ಭಾರೀ ಕುಸಿತ ದಾಖಲಿಸಿ, 49,744.32ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.