ಮುಂಬಯಿ: ದೇಶಾದ್ಯಂತ ಕೋವಿಡ್ ಸೋಂಕು ಏಕಾಏಕಿ ಹೆಚ್ಚಳವಾಗುತ್ತಿರುವ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಬುಧವಾರ(ಮಾರ್ಚ್ 31) ಆರಂಭಿಕ ವಹಿವಾಟಿನಲ್ಲಿ 500 ಅಂಕ ಕುಸಿತ ಕಂಡಿದ್ದು, ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಏ.1 ರಿಂದ 45 ವರ್ಷ ಮೇಲಿನ ಎಲ್ಲರಿಗೂ ಲಸಿಕೆ: 2000 ಹೆಚ್ಚುವರಿ ಲಸಿಕಾ ಕೇಂದ್ರ: ಸುಧಾಕರ್
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 500 ಅಂಕ ಇಳಿಕೆಯಾಗಿದ್ದು, 49,653 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 125 ಅಂಕ ಇಳಿಕೆಯಾಗಿದ್ದು, 14,720ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಕುಸಿತದಿಂದ ಎಚ್ ಡಿಎಫ್ ಸಿ ಬ್ಯಾಂಕ್, ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಒಎನ್ ಜಿಸಿ ಷೇರುಗಳು ನಷ್ಟ ಅನುಭವಿಸಿದೆ.
ಏತನ್ಮಧ್ಯೆ ಬಜಾಜ್, ಹಿಂದೂಸ್ತಾನ್ ಯುನಿಲಿವರ್, ಆ್ಯಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಎನ್ ಟಿಪಿಸಿ, ಆಲ್ಟ್ರಾ ಟೆಕ್ ಸಿಮೆಂಟ್, ಐಟಿಸಿ, ಎಸ್ ಬಿಐ ಷೇರುಗಳು ಲಾಭ ಗಳಿಸಿವೆ.
ಮಂಗಳವಾರ(ಮಾರ್ಚ್ 30) ಜಗತ್ತಿನಾದ್ಯಂತ ಷೇರುಪೇಟೆಯಲ್ಲಿ ಧನಾತ್ಮಕ ವಾತಾವರಣವಿದ್ದ ಹಿನ್ನೆಲೆಯಲ್ಲಿ ಮುಂಬಯಿ ಷೇರುಪೇಟೆಯ ಬಿಎಸ್ ಇ ಸೂಚ್ಯಂಕ 1,128.08 ಅಂಕ ಏರಿ 50,136.58ಕ್ಕೆ ತಲುಪಿತ್ತು. ಎನ್ ಎಸ್ ಇ ಸೂಚ್ಯಂಕ 337.80 ಅಂಕ ಏರಿ 14,845.10ರಲ್ಲಿ ವಹಿವಾಟು ಅಂತ್ಯಗೊಂಡಿತ್ತು.