ಮುಂಬಯಿ, ನ. 6: ಇತ್ತೀಚೆಗೆ ನಿಧನ ಹೊಂದಿದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಆಜೀವ ಗೌರವಾಧ್ಯಕ್ಷ, ರಾಷ್ಟೀಯ ಬಿಲ್ಲವ ಮಹಾಮಂಡಲದ ಮಾಜಿ ಅಧ್ಯಕ್ಷ, ಗೌರವಾಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ನಿಕಟಪೂರ್ವ ಕಾರ್ಯಾಧ್ಯಕ್ಷ, ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣ ಅವರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಾಯಂದರ್ ಸ್ಥಳೀಯ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ನ. 1ರಂದು ಭಾಯಂದರ್ ಪೂರ್ವದ ಬಿ. ಪಿ. ಕ್ರಾಸ್ ರೋಡ್, ಶ್ರೀ ಮಹಾದೇವ್ ನಗರ ಸೊಸೈಟಿಯಲ್ಲಿರುವ ಬಿಲ್ಲವರ ಅಸೋಸಿಯೇಶ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಜರಗಿತು.
ಬಿಲ್ಲವ ರತ್ನ ಜಯ ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಮಾಜದ ಹಿರಿಯರು, ಪರಿಸರದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಮುದಾಯಗಳ ಸದಸ್ಯರು, ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿ ಅವರ ಆದರ್ಶಗಳ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.
ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಕೆ. ಪೂಜಾರಿ ಮಾತನಾಡಿ, ಬದುಕಿನ ಉನ್ನತ ಮೌಲ್ಯವನ್ನು ಅರ್ಥೈಸಿಕೊಂಡು ತನ್ನ ಜೀವನವನ್ನು ಸಮಾಜಮುಖೀಯಾಗಿ ಸಾರ್ಥಕಗೊಳಿಸಿದವರು ಜಯ ಸುವರ್ಣರು. ಅವರ ವ್ಯಕ್ತಿತ್ವವೇ ನಮಗೆ ದಾರಿ ದೀಪವಾಗಿದೆ. ಕೂಡಿ ಬಾಳುವ, ಕೂಡು ಕುಟುಂಬದ ಸಂಸ್ಕೃತಿಯನ್ನು ಬೋಧಿಸಿದ ಜಯ ಸುವರ್ಣರು ಸಂಘಟನೆಯ ಶಕ್ತಿಯಾಗಿ ಪ್ರಸಿದ್ಧಿ ಪಡೆದರು. ಅವರ ಅಪೂರ್ವ ಸಹಕಾರದಿಂದ ಭಾಯಂದರ್ ಸ್ಥಳೀಯ ಕಚೇರಿ ಸ್ವಂತ ಸ್ಥಳದಲ್ಲಿ ಸಾಮಾಜಿಕ ಸೇವೆಯಲ್ಲಿ ಮುನ್ನಡೆಯಲು ಸಾಧ್ಯವಾಯಿತು. ಅವರು ನಮ್ಮೊಂದಿಗೆ ಮಾನಸಿಕವಾಗಿ ಸದಾ ನೆಲೆಸಿರುತ್ತಾರೆ. ಅವರ ಆದರ್ಶ, ಮಾರ್ಗದರ್ಶಗಳು ನಮಗೆ ಪ್ರೇರಕ ಶಕ್ತಿಯಾಗಿದೆ. ಯುವ ಪೀಳಿಗೆ ಜಯ ಸುವರ್ಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಭಾಯಂದರ್ ಸ್ಥಳೀಯ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಗೋಪಾಲ್ ಸುವರ್ಣ ಮಾತನಾಡಿ, ಸುವರ್ಣರ ಕ್ರಿಯಾಶೀಲತೆ, ಇಚ್ಛಾಶಕ್ತಿಯ ರಚನಾತ್ಮಕ ಬಳಕೆಯಿಂದ ಇಂದು ಬಿಲ್ಲವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜದ ಬಡವರು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ನೆರವು ಒದಗಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಆದರ್ಶವನ್ನು ಪಾಲಿಸಿಕೊಂಡು ಬಂದ ತತ್ವಜ್ಞಾನಿ ಅವರಾಗಿದ್ದರು ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ್ ಜಿ. ಹಳೆಯಂಗಡಿ ಅವರು ಸುವರ್ಣರ ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಿವೈನ್ ಪಾರ್ಕ್‌ನ ಮೀರಾ-ವಿರಾರ್‌ನ ಮಹಿಳಾ ವಿಭಾಗದ ಜ್ಯೋತಿ ಆರ್. ಪೂಜಾರಿ, ಅಯ್ಯಪ್ಪ ಆರಾಧನಾ ಭಕ್ತಮಂಡಳ ಭಾಯಂದರ್ ಇದರ ಗುರುಸ್ವಾಮಿ ಸುಧಾಕರ ಜಿ. ಪೂಜಾರಿ, ರಾಜಕೀಯ ನೇತಾರೆ ಸುಮಿತ್ರಾ ಕರ್ಕೇರ, ಸಮಾಜ ಸೇವಕರಾದ ರತ್ನಾಕರ ಅಮೀನ್, ರವೀಂದ್ರ ಪೂಜಾರಿ, ರವೀಂದ್ರ ಬಂಗೇರ, ಗಣೇಶ್ ಪೂಜಾರಿ, ಪದಾಧಿಕಾರಿಗಳು, ಯುವ ವಿಭಾಗದವರು, ಮಹಿಳಾ ಸದಸ್ಯೆಯರು ಮೊದಲಾದವರು ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.
ಜಯ ಸುವರ್ಣರಲ್ಲಿ ಅದ್ಭುತವಾದ ಕರ್ತೃತ್ವ ಶಕ್ತಿ ಇದೆ. ನಿರ್ಧರಿಸಿದ್ದನ್ನು ಮಾಡಿ ಪೂರೈಸಿದ್ದರಿಂದ ಬಿಲ್ಲವ ಭವನ, ಬಿಲ್ಲವ ಮಹಾಮಂಡಲ, ಭಾರತ್ ಬ್ಯಾಂಕ್, ಸಾಂಸ್ಕೃತಿಕ , ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳು ಇತ್ಯಾದಿಗಳು ಜನಸಾಮಾನ್ಯರ ಸಮ್ಮುಖದಲ್ಲಿವೆ. ಅವರದು ನಿರಾಡಂಬರ, ಶಾಂತ, ಸ್ನೇಹಪ್ರೀಯ ವ್ಯಕ್ತಿತ್ವ. ಬಿಲ್ಲವ ಸಮಾಜವನ್ನು ಗೌರವ ಸ್ಥಾನದಲ್ಲಿ ನಿಲ್ಲಿಸಿದ ಅವರ ಸಾತ್ವಿಕ ಗುಣ ನಮಗೆಲ್ಲ ಸ್ಫೂರ್ತಿಯ ಸೆಲೆಯಾಗಿದೆ.
-ಚಿತ್ರಾಪು ಕೆ. ಎಂ. ಕೋಟ್ಯಾನ್ ಗೌರವ ಪ್ರಧಾನ ಕಾರ್ಯದರ್ಶಿ, ವಿದ್ಯಾದಾಯಿನಿ ಸಭಾ ಮುಂಬಯಿ
ಸಂಘ-ಸಂಸ್ಥೆಗಳನ್ನು ಪರಸ್ಪರ ಒಗ್ಗೊಡಿಸುವ ಜಾಣ್ಮೆ, ಹೃದಯ – ಹೃದಯಗಳನ್ನು ಬೆಸೆಯುವ ಚತುರತೆ, ಕಾನೂನಿನ ಹೆಜ್ಜೆಯಲ್ಲಿ ಗುರಿ ಸಾಧಿಸುವ ಸಂಘಟನೆ, ಬಂಧುತ್ವದ ಭದ್ರ ಸೇತುವೆಯಿಂದ ಜಯ ಸುವರ್ಣರು ಬೆಲೆ ಕಟ್ಟಲಾಗದ ಮಾಣಿಕ್ಯ ಆಗಿದ್ದಾರೆ. ಅವರ ಅಸಾಧಾರಣ ಕೊಡುಗೆಯಿಂದ ಬಡವರ ಬಾಳು ಬೆಳಗಿದೆ. ಪ್ರಬಲ ಸಂಘಟನೆಯಿಂದ ಬಿಲ್ಲವ ಸಮಾಜ ಬಹುಮುಖ ಪ್ರಗತಿ ಸಾಧಿಸಿದೆ.
-ಜಯರಾಮ ಎಂ. ಶೆಟ್ಟಿ ಅಧ್ಯಕ್ಷರು, ಹನುಮಾನ್ ಭಜನ ಮಂಡಳಿ ಮಣಿಕಂಠ ಸೇವಾ ಸಂಘ ಭಾಯಂದರ್
ಚಿತ್ರ-ವರದಿ: ರಮೇಶ್ ಅಮೀನ್