ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದದ್ದು. ಈ ಸಂಬಂಧ ನಡೆಸುವ ಪರಿಸರ ಪರವಾದ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗಕ್ಕೆ ನೀರಿಲ್ಲ. ಇರುವ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರಕ್ಕೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ. ಲಿಂಗನಮಕ್ಕಿ ಆಣೆಕಟ್ಟಿನಿಂದ 40 ಟಿಎಂಸಿ ನೀರನ್ನು ಬೆಂಗಳೂರಿಗೆ ಒಯ್ಯಲು ಈಗಾಗಲೇ ಸರ್ವೇಗೆ 73 ಲಕ್ಷ ರೂ. ಮೀಡಲಿಡಲಾಗಿದೆ. ತಕ್ಷಣ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು ಎಂದು ಹೇಳಿದರು.
2019ರಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಮಾಡಲಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಯೋಜನೆ ಕುರಿತು ಆಸಕ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ನಾನು ಶಾಸಕನಾಗಿದ್ದೆ. ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ, ಸಾಗರ ಬಂದ್ ಸಹ ನಡೆಸಲಾಗಿತ್ತು. ವಿವಿಧ ಮಠಾಧೀಶರು, ಪರಿಸರವಾದಿಗಳು, ಸಂಘಟನೆಗಳು ಬೆಂಬಲ ನೀಡಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಾಗಿತ್ತು.
ನಂತರ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಯೋಜನೆ ಕೈಬಿಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಿದ್ದರು. ಇದೀಗ ಮತ್ತೊಮ್ಮೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡುವುದಿಲ್ಲ. ಈ ಸಂಬಂಧ ಯಾವುದೇ ಸಂಘಟನೆ ಹೋರಾಟ ಕೈಗೆತ್ತಿಕೊಂಡರೂ ಅದಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಲಾಗುತ್ತದೆ. ಜೊತೆಗೆ ನಮ್ಮ ಹಂತದಲ್ಲಿ ಸಹ ಹೋರಾಟ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ಈಗಾಗಲೇ ಎತ್ತಿನಹೊಳೆ ಯೋಜನೆ ವಿಫಲವಾಗಿದೆ. ಸುಮಾರು 22 ಸಾವಿರ ಕೋಟಿ ರೂ. ಖರ್ಚು ಮಾಡಿ ಒಂದು ಹನಿ ನೀರನ್ನು ಹರಿಸಲು ಆಗಲಿಲ್ಲ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಸಹ ಇಂತಹದ್ದೆ ಆಗಿದೆ. ಸುಮಾರು 35 ಸಾವಿರ ಕೋಟಿ ರೂ. ಯೋಜನೆಗೆ ತಗಲುತ್ತದೆ. ಸಮುದ್ರಮಟ್ಟದಿಂದ 2800 ಅಡಿ ಎತ್ತರಕ್ಕೆ ನೀರು ಹರಿಸಲು ತಗಲುವ ವಿದ್ಯುತ್, ಶ್ರಮ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಜೊತೆಗೆ ಅಪಾರ ಪ್ರಮಾಣದ ಪರಿಸರ, ಅರಣ್ಯನಾಶವಾಗುತ್ತದೆ. ಪೂರ್ವಾಭಿಮುಖವಾಗಿ ನದಿಯನ್ನು ತಿರುಗಿಸುವುದೇ ಕಾನೂನಿಗೆ ವಿರುದ್ಧವಾದದ್ದು. ಐಎಎಸ್ ಅಧಿಕಾರಿ ಕೆಲವರ ಲಾಬಿಯಿಂದ ಯೋಜನೆ ಮುನ್ನೆಲೆಗೆ ಬಂದಿದೆ. ತುಷಾರ್ ಗಿರಿನಾಥ್ ಶಿವಮೊಗ್ಗ ಜಿಲ್ಲೆಯಲ್ಲಿದ್ದು ಇಲ್ಲಿನ ನೀರನ್ನು ಕುಡಿದವರು. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಶರಾವತಿ ನದಿ ನೀರು ಒಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಸಬಾರದು ಎಂದು ಹೇಳಿದರು.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಇತರ ಮೂಲ ಹುಡುಕಿಕೊಳ್ಳಿ. ಹಿಂದೆ ರಕ್ತ ಕೊಡುತ್ತೇವೆ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲು ಬಿಡುವುದಿಲ್ಲ ಎಂದು ಹೇಳಿದ ಕೆಲವರು ಈಗ ಧ್ವನಿ ಎತ್ತಬೇಕು. ಕಾರ್ಯಸಾಧುವಲ್ಲದ ಯೋಜನೆ ಅನುಷ್ಠಾನದ ಹಿಂದೆ ಕಮೀಷನ್ ಲಾಬಿ ಇದೆ ಎನ್ನುವ ಚರ್ಚೆ ಸಹ ನಡೆಯುತ್ತಿದೆ. ಬೆಂಗಳೂರಿಗೆ ಶರಾವತಿ ನದಿ ನೀರು ಹರಿಸುವುದು ಮತ್ತು ಮತ್ತೊಂದು ಪರಿಸರ ವಿರೋಧಿ ಯೋಜನೆಯಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯಾವುದೇ ಕಾರಣಕ್ಕೂ ಅನುಷ್ಟಾನಕ್ಕೆ ಬಿಡುವುದಿಲ್ಲ ಎಂದರು.
ಗೋಷ್ಠಿಯಲ್ಲಿ ಡಾ. ರಾಜನಂದಿನಿ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶಪ್ರಸಾದ್, ಸತೀಶ್ ಕೆ., ಹರೀಶ್ ಮೂಡಳ್ಳಿ, ಸಂತೋಷ್ ಇನ್ನಿತರರು ಹಾಜರಿದ್ದರು.