Advertisement
ಕೇಪ್‌ಟೌನ್‌ನಲ್ಲಿ ಕುಡಿಯುವ ನೀರಿನ ಕ್ಷಾಮ ಎದುರಾದ ರೀತಿಯಲ್ಲೇ ಐಟಿ ಹಬ್ ಎನಿಸಿಕೊಂಡಿರುವ ಬೆಂಗಳೂರಿನಲ್ಲಿಯೂ ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಪ್ರತಿಷ್ಠಿತ ಬಿಬಿಸಿ ವರದಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಶರಾವತಿಯತ್ತ ಕಣ್ಣು ಹೊರಳಿಸಿದೆ. “ಬೆಂಗಳೂರಿಗೆ ಶರಾವತಿ ನದಿಯಿಂದ ನೀರು ತರುವ ಆಲೋಚನೆ ಸರ್ಕಾರದ ಮುಂದಿದೆ’ ಎಂದು ಸ್ವತಃ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಸಮಸ್ಯೆಯನ್ನು ಎದುರಿಸುತ್ತಿರುವ ಹಲವು ಪ್ರದೇಶಗಳಿಗೆ ಶರಾವತಿ ನದಿ ನೀರು ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದರು.
Related Articles
Advertisement
ಬಿಬಿಸಿ ವರದಿಯಲ್ಲಿ ಹುರುಳಿಲ್ಲ: ಬೆಂಗಳೂರು ನಗರಕ್ಕೆ ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಬರಲಿದೆ ಎಂದು ಬಿಬಿಸಿವರದಿ ಮಾಡಿದೆ ಎಂದು ಹೇಳಿದ ಸಚಿವರು, ಈ ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಕುಡಿಯುವ ನೀರಿಗಾಗಿಯೇ ಸರ್ಕಾರ
ಮುಂಜಾಗೃತವಾಗಿ ಸಾಕಷ್ಟು ಕ್ರಮವನ್ನು ಕೈಗೊಂಡಿದೆ. ಇದಕ್ಕಾಗಿಯೇ ಜಲಮಂಡಳಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ
ಮಾಡಿದೆ ಎಂದರು. ಏನಿದು ಶರಾವತಿ ಯೋಜನೆ..?: ಸದ್ಯ ಬೆಂಗಳೂರು ನಗರಕ್ಕೆ ನೂರು ಕಿ.ಮೀ ದೂರದ ಕಾವೇರಿ ನದಿಯಿಂದ ಕುಡಿಯುವ ನೀರು ಬರುತ್ತಿದೆ. ಈಗ ಸುಮಾರು 400 ಕಿ.ಮೀ ದೂರದ ಶರಾವತಿ ನದಿಯಿಂದ ಬೆಂಗಳೂರಿಗರಿಗೆ ನೀರು ತಂದು ಕೊಡಲು ಸರ್ಕಾರ ಮುಂದಾಗಿದೆ. ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ಶರಾವತಿ ನದಿಯಿಂದ ಕನಿಷ್ಠ 10 ಟಿಎಂಸಿ ನೀರನ್ನು ಬೆಂಗಳೂರಿಗೆ ತರಬಹುದು ಎಂದು ಜಲಮಂಡಳಿ ಮಾಜಿ ಅಧ್ಯಕ್ಷ ಬಿ.ಎನ್. ತ್ಯಾಗರಾಜ್ ನೇತೃತ್ವದ ಸಮಿತಿ 2016ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಒಂದು ವೇಳೆ ಸರ್ಕಾರದ ಆಲೋಚನೆಯಂತೆ ತ್ಯಾಗರಾಜ್ ಸಮಿತಿ ವರದಿ ಜಾರಿಗೆ ಬಂದಲ್ಲಿ, ಬೆಂಗಳೂರು ನಗರಕ್ಕಷ್ಟೇ ಅಲ್ಲ, ಮೈಸೂರು ಸೇರಿದಂತೆ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ನೀರು ಒದಗಿಸಬಹುದು. ಪಶ್ಚಿಮಘಟ್ಟದಲ್ಲಿ ಬರುವ ಲಿಂಗನಮಕ್ಕಿ ಅತಿದೊಡ್ಡ ಜಲಾಶಯವಾಗಿದ್ದು, 151 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಪ್ರತಿ ವರ್ಷ 181 ಟಿಎಂಸಿಯಷ್ಟು ಒಳಹರಿವು ಇರುತ್ತದೆ. ಲಿಂಗನಮಕ್ಕಿ ನೀರನ್ನು ತಂದರೆ ಸಂಪೂರ್ಣ ಬಿಬಿಎಂಪಿ ಪ್ರದೇಶ ಸೇರಿ ಚಿತ್ರದುರ್ಗ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ನೀರು ಒದಗಿಸಬಹುದು ಎಂದು ತ್ಯಾಗರಾಜ್ ಸಮಿತಿ ಹೇಳಿತ್ತು. ತ್ಯಾಗರಾಜ್ ಸಮಿತಿ ವರದಿಯ ಸಾಧಕ-ಬಾಧಕಗಳ ಜೊತೆಗೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಂದಲೂ ಎಷ್ಟೆಷ್ಟು ನೀರು ಲಭ್ಯವಾಗುತ್ತದೆ ಎಂಬುದನ್ನು ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.
ಲಿಂಗನಮಕ್ಕಿ ಜಲಾಶಯದಿಂದ ಅರ್ಕಾವತಿ ನದಿಪಾತ್ರದ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶಕ್ಕೆ ನೀರು ತರಬಹುದು ಎಂದು
ತ್ಯಾಗರಾಜ್ ಸಮಿತಿ ಪ್ರಸ್ತಾಪಿಸಿತ್ತು. ಶರಾವತಿ ನದಿಯಿಂದ ಮೊದಲು ಪೈಪ್‌ಲೈನ್ ಮೂಲಕ ಹಾಸನದ ಯಗಚಿ ಆಣೆಕಟ್ಟೆಗೆ ನೀರು ಎತ್ತುವಳಿ ಮಾಡಬೇಕು. ಮುಂದೆ ಅದನ್ನು ಇಳಿಜಾರು ಭೂಪ್ರದೇಶದ ಮೂಲಕ ತಿಪ್ಪಗೊಂಡನಹಳ್ಳಿ ಜಲಾನಯನಕ್ಕೆ ಹರಿಸಬೇಕು ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಅದರಂತೆ, ಜಲಮಂಡಳಿ ತಿಪ್ಪಗೊಂಡನಹಳ್ಳಿಯಿಂದ ಬೆಂಗಳೂರು ನಗರಕ್ಕೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿದೆ. ನೆರೆಯ ರಾಜ್ಯಗಳಲ್ಲಿ ಹರಿದು ಹೋಗುವ ನದಿಗಳಿಂದ ನೀರು ಪಡೆದುಕೊಳ್ಳಬೇಕಾದರೆ ಅನೇಕ ಸಂದರ್ಭಗಳಲ್ಲಿ ಗಡಿ ಮತ್ತು ಕಾನೂನು ಸಮಸ್ಯೆ ಎದುರಾಗುತ್ತದೆ. ಸದ್ಯಕ್ಕೆ ಮೇಕೆದಾಟು ಯೋಜನೆ ಇದಕ್ಕೆ ಉದಾಹರಣೆ. ಆದರೆ, ಶರಾವತಿ ನದಿ ನಮ್ಮಲ್ಲೇ ಹುಟ್ಟಿ, ನಮ್ಮಲೇ ಸಮುದ್ರ ಸೇರುತ್ತದೆ. ಹೀಗಾಗಿ ಇದಕ್ಕೆ ಯಾವ ವಿವಾದವೂ ಇಲ್ಲ. ಗಡಿ ಸಮಸ್ಯೆಯೂ ವಿದ್ಯುತ್ ಉತ್ಪಾದನೆಗಷ್ಟೇ
ಸೀಮಿತವಾಗಿರುವ ಈ ನೀರನ್ನು ಕುಡಿಯುವುದಕ್ಕೂ ಬಳಸಲು ಆಲೋಚಿಸಬಹುದು. ಕನಿಷ್ಠ 10 ಟಿಎಂಸಿ ಅಡಿ ನೀರನ್ನು ಮಳೆ ಬಂದಾಗ ಲಿಫ್ಟ್ ಮಾಡಿದರೂ ಎಷ್ಟೊ ಅನುಕೂಲ ಆಗುತ್ತದೆ. ಇದರ ಸಾಧಕ ಬಾಧಕಗಳ ಬಗ್ಗೆ ತಜ್ಞರು ಪರಿಶೀಲಿಸಲಿದ್ದಾರೆ. ಅದರ
ನಂತರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಅನ್ನುವುದು ಸರ್ಕಾರದ ನಿಲುವು ಆಗಿದೆ.