ಹೊನ್ನಾವರ: ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕೃತಿಕ ಉತ್ಸವಗಳು ಬೇಕು ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೋಣ ಹೇಳಿದರು.
ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಶರಾವತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಭೂತಗಳಲ್ಲಿ ನೀರು ಪ್ರಮುಖವಾದುದು. ಅದನ್ನು ಗೌರವಿಸುವ ಈ ಉತ್ಸವ ಅರ್ಥಪೂರ್ಣವಾದುದ್ದು. ತಾಯಿ ಶರಾವತಿ ಆಶ್ರಯದಲ್ಲಿ ಅದೆಷ್ಟೋ ಪ್ರತಿಭಾವಂತರು ಹೊರಬಂದು ದೇಶಮಟ್ಟದಲ್ಲಿ ಬೆಳೆದಿದ್ದಾರೆ. ಶರಾವತಿಯ ನೀರು ಪವಿತ್ರವಾದದ್ದು. ಹುಟ್ಟಿದಲ್ಲಿನಿಂದ ಸಂಗಮದವರೆಗೆ ದೇಶಕ್ಕೆ ಬೆಳಕಾಗಿ, ರೈತನ ನೆಲಕ್ಕೆ ಜೀವಜಲವಾಗಿ, ನೋಡುಗರ ಕಣ್ಣಿಗೆ ಜಲಪಾತವಾಗಿ ಬಹುವಿಧದಲ್ಲಿ ಸಲ್ಲುತ್ತಿರುವ ಶರಾವತಿ ನದಿ ತಾಯಿಗೆ ಸಮಾನ. ಈ ಸಮಾರಂಭದ ಮುಖಾಂತರ ತಾಯಿಯನ್ನು ಗೌರವಿಸುವುದು, ಕಲಾಪ್ರದರ್ಶನವನ್ನು ಅವರಿಗೆ ಅರ್ಪಿಸುವುದು ಪವಿತ್ರವಾದ ಕೆಲಸ. ಕನ್ನಡ ನಾಡಿನ ವಿಚಾರ, ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ವೇದಿಕೆ ಕಾರ್ಯೋನ್ಮುಖವಾಗಿರುವುದು ಸಂತೋಷ. ಜಿಲ್ಲೆ, ರಾಜ್ಯಮಟ್ಟದ ಉತ್ಸವವಾಗಲಿ ಎಂದರು.
ಅಭಿಯಂತರಾಗಿ, ಕಲಾಪ್ರೇಮಿಯಾಗಿ, ಕಲಾವಿದರ ಹೆತ್ತ ತಂದೆಯಾಗಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಸಂದ ಸಜ್ಜನ ಎನಿಸಿಕೊಂಡ ನಿವೃತ್ತ ಅಭಿಯಂತ ಆರ್.ಜಿ. ಭಟ್, ಶಿಕ್ಷಣಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ, ಶಿಕ್ಷಕರಾಗಿ, ಶಾಲೆ ಸ್ಥಾಪಕರಾಗಿ, ನಿವೃತ್ತಿಯ ನಂತರವೂ ಇಳಿವಯಸ್ಸಿನಲ್ಲಿ ಊರ ಮತ್ತು ವಿದ್ಯಾರ್ಥಿ ಹಿತ ಬಯಸುವ ಅರುಣ ಉಭಯಕರ ಮಲ್ಲಾಪುರ ಮತ್ತು ಅವರ ಪತ್ನಿ ಸಮಾಜಸೇವಕಿ ಛಾಯಾ ಉಭಯಕರ, ಛಾಯಾಗ್ರಹಣ ಮತ್ತು ಮೃದಂಗವಾದನದಲ್ಲಿ ಪರಿಣಿತಿ ಪಡೆದ ಪಿ.ಕೆ. ಹೆಗಡೆ, ಹರಿಕೇರಿ, ಜಿಲ್ಲೆಗೆ ಅಪರೂಪದ ಮರಳು ಶಿಲ್ಪಿ ವೆಂಕಟ್ರಮಣ ಆಚಾರ್ಯ, ಸಂಗೀತ ಶಿಕ್ಷಕಿಯಾಗಿನೂರಾರು ಜನರನ್ನು ತರಬೇತಿಗೊಳಿಸಿದ ಲಕ್ಷ್ಮೀ ಹೆಗಡೆ ಹೊಸಾಕುಳಿ ಅವರನ್ನು ಶಾಲು, ಸ್ಮರಣಿಕೆ, ಪೇಟ, ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು.
ಶ್ರೀಕಾಂತ ಭಟ್ ಕುಮಟಾ ಅಧ್ಯಕ್ಷತೆ ವಹಿಸಿದ್ದರು. ಶರಾವತಿ ವೇದಿಕೆ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಮತ್ತು ಕಾರ್ಯದರ್ಶಿ ಶಂಭು ಹೆಗಡೆ ಸಂತನ್, ಗೌರವ ಕಾರ್ಯದರ್ಶಿ ಗೋಪಾಲಕೃಷ್ಣ ಹೆಗಡೆ ಇದ್ದರು. ವೇದಿಕೆ ಗೌರವಾಧ್ಯಕ್ಷ ಪಿ.ಎಸ್. ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್.ಜಿ. ಭಟ್ ಮತ್ತು ಕಲ್ಪನಾ ಹೆಗಡೆ ನಿರ್ವಹಿಸಿದರು.
ನಂತರ ನಡೆದ ಪೂಜಾ ಹೆಗಡೆ, ಸಾನ್ವಿ ರಾವ್, ಅನ್ವಿತಾ ಹರೀಶ ನಾಯ್ಕ ಮತ್ತು ಸಂಗಡಿಗರಿಂದ ಭರತನಾಟ್ಯ, ರಿಷಿ ಸಾಯಿದಾಸ ಇವರಿಂದ ಗಾಯನ. ಲತಾ ಗುರುರಾಜ ಹಾಗೂ ಗುರುರಾಜ ಹೆಗಡೆ ಆಡುಕಳ ಇವರಿಂದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡರು.