ಸಾಗರ: ಮುಳುಗಡೆಯಿಂದ ಈ ಭಾಗದ ಜನರಿಗೆ ಶರಾವತಿ ನದಿ ಶಾಪ ಎನ್ನುವ ಭಾವನೆ ಕಾಡುತ್ತಿದೆ. ಶರಾವತಿ ನದಿಯನ್ನು ಉಪಯೋಗಿಸಿಕೊಂಡು ಹೊಸ ಹೊಸ ಯೋಜನೆಗಳನ್ನು ಹೇರುವ ಮೂಲಕ ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ಈ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಬಾರದು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಖಾರವಾಗಿ ಹೇಳಿದರು.
ತಾಲೂಕಿನ ಹೆನ್ನಿ ಭಾಗದಲ್ಲಿ ಶರಾವತಿ ಭೂಗರ್ಭ ವಿದ್ಯುತ್ ಸ್ಥಾವರ ನಿರ್ಮಾಣ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರ್ವೇ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಯೋಜನೆಗೆ ಸಂಬಂಧಪಟ್ಟಂತೆ ಹಸಿರು ನ್ಯಾಯಪೀಠ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರ ಸರ್ವೇಗೆ ಒಪ್ಪಿಗೆ ನೀಡಿದೆ ಎಂದು ಕೆಪಿಸಿ ಹೇಳುತ್ತಿದೆ. ಈಚೆಗೆ ಜೋಗದಲ್ಲಿ ನಡೆದ ಸಭೆಯಲ್ಲಿ ಸಂಸದರು ಮತ್ತು ನಾನು ಪಾಲ್ಗೊಂಡಾಗ ನೀಡಿದ ಮಾಹಿತಿ ಅಪೂರ್ಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಯೋಜನೆಯಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿದ್ಯುತ್ ಸ್ಥಾವರವನ್ನು ಭೂಮಿಯೊಳಗೆ ಮಾಡಿದರೂ, ಹೆಚ್ಚು ವಿದ್ಯುತ್ ಸಾಮರ್ಥ್ಯ ಇರುವ ವಿದ್ಯುತ್ ತಂತಿಗಳನ್ನು ಎಳೆಯುವಾಗ ಸಾವಿರಾರು ಎಕರೆ ಅರಣ್ಯ ನಾಶವಾಗುವ ಜೊತೆಗೆ ಈ ಭಾಗದ ಜೀವವೈವಿಧ್ಯತೆ ಮೇಲೂ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಶರಾವತಿ ನದಿಯಿಂದ ಕೆಪಿಸಿಯವರು ಚೆನ್ನಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಭಾಗದ ಜನರಿಗೆ ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ರಾಜ್ಯದ ಸಂಸ್ಥೆಗಳಲ್ಲಿ ಒಂದು ಎನ್ನುವುದನ್ನು ಕೆಪಿಸಿ ಅಧಿಕಾರಿಗಳು ಮರೆತಿದ್ದು, ತಾವು ಬಹುರಾಷ್ಟ್ರೀಯ ಕಂಪನಿಗಳ ವಾರಸುದಾರರು ಎನ್ನುವಂತೆ ವರ್ತಿಸುತ್ತಿದ್ದಾರೆ. ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ಕೋಟ್ಯಂತರ ರೂ. ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಪಪಂ ಸದಸ್ಯರಾದ ನಾಗರಾಜ ವಾಟೆಮಕ್ಕಿ, ಪಿ.ಮಂಜುನಾಥ್, ಲಲಿತಾ ಮಂಜುನಾಥ್, ವಾಸಂತಿ ರಮೇಶ್, ಉಮೇಶ್, ಹರೀಶ್ ಗೌಡ, ಲಕ್ಷ್ಮೀರಾಜು, ಜಯಲಕ್ಷ್ಮೀ, ಸುಜಾತ ಜೈನ್, ಪ್ರಮುಖರಾದ ದೇವರಾಜ್ ಜೈನ್, ಬಿ.ಟಿ.ರವೀಂದ್ರ, ಜಗದೀಶ್, ನಾಗೇಂದ್ರ ಮಹಾಲೆ ಇನ್ನಿತರರು ಹಾಜರಿದ್ದರು.