Advertisement

ಶರಾರಾ ಸುಂದರಿ

06:00 AM Sep 12, 2018 | |

“ಬೆಂಕಿಯ ಕಿಡಿ’ ಎಂಬ ಹೆಸರನ್ನು ಪಡೆದ ದಿರಿಸಿನ ಬಗ್ಗೆ ಗೊತ್ತಾ? ಇದನ್ನು ಧರಿಸಿದ ಹೆಣ್ಮಗಳು ನೋಡುಗರ ಕಣ್ಣಲ್ಲಿ ಮಿಂಚು ಹರಿಸುವುದರಿಂದ ಈ ಹೆಸರನ್ನು ಇಟ್ಟಿದ್ದಾರೋ ಎಂಬ ಅನುಮಾನ ಬಂದರೆ ತಪ್ಪೇನಿಲ್ಲ…

Advertisement

ಶುಭ ಸಮಾರಂಭ ನಡೆಯುವ, ಹೊಸ ಹೊಸ ದಿರಿಸುಗಳನ್ನುಟ್ಟು ತಯಾರಾದ ಹೆಣ್ಮಕ್ಕಳಿಗೆ ಹಿರಿಯರು ಹೇಳುವ ಕಿವಿಮಾತು “ದೀಪ, ಹಣತೆಗಳಿಂದ ದೂರವಿರಿ’ ಎಂದು. ಹಬ್ಬ ಹರಿದಿನಗಳ ಸಮಯದಲ್ಲಿ ಧರಿಸುವ ಬಹುತೇಕ ಸಾಂಪ್ರದಾಯಿಕ ದಿರಿಸುಗಳು ನೆಲ ತಾಗುವಂತಿರುವುದರಿಂದ ಈ ಎಚ್ಚರಿಕೆಯನ್ನು ಹಿರಿಯರು ಸಾಮಾನ್ಯವಾಗಿ ನೀಡುತ್ತಾರೆ. ಆದರೆ, “ಬೆಂಕಿಯ ಕಿಡಿ’ ಎಂಬ ಹೆಸರನ್ನು ಹೊತ್ತ ದಿರಿಸಿನ ಬಗ್ಗೆ ಗೊತ್ತಾ? ನಿಮ್ಮಲ್ಲಿ ಕೆಲವರಿಗೆ “ಶರಾರಾ’ ಎಂದರೆ ಗೊತ್ತಾಗಬಹುದು. ಶರಾರಾ ಎಂಬುದರ ಅರ್ಥ “ಕಿಡಿ’. ಅಷ್ಟುಮಾತ್ರಕ್ಕೆ ಅದಕ್ಕೆ ಬೆಂಕಿ ತಾಕುವುದಿಲ್ಲ ಎಂದು ತಿಳಿಯಬೇಡಿ!

ಲಂಗವೂ ಅಲ್ಲ, ಪ್ಯಾಂಟೂ ಅಲ್ಲ
ಅತ್ತ ಪ್ಯಾಂಟು ಕೂಡಾ ಅಲ್ಲದ, ಇತ್ತ ಪೂರ್ತಿ ಲಂಗದ ಹಾಗೂ ಇಲ್ಲದ ಶರಾರಾವನ್ನು ಕುರ್ತಿ, ದುಪಟ್ಟಾ ಮತ್ತಿತರ ಟಾಪ್‌ಗ್ಳ ಜೊತೆ ತೊಡಬಹುದು. ಮಂಡಿಯ ತನಕ ಪ್ಯಾಂಟನ್ನೇ ಹೋಲುತ್ತದೆ. ಮಂಡಿಯಿಂದ ಕೆಳಗೆ ಕೊಡೆಯ ಹಾಗೆ ತೆರೆದುಕೊಳ್ಳುತ್ತದೆ. ಹೀಗಾಗಿ ಇದನ್ನು “ಅಂಬ್ರೆಲ್ಲಾ ಪ್ಯಾಂಟ್‌’ ಅಂತಲೂ ಕರೆಯುವುದಿದೆ. ಇದು 3 ಪೀಸ್‌ ಸೂಟ್‌ ಜೊತೆಗೆ ಬರುವಂಥದ್ದು. ಟಾಪ್‌ ಆಗಿ ನಿಮಗಿಷ್ಟವಾಗುವ, ಶರಾರಾಗೆ ಸರಿಹೊಂದುವ ಯಾವುದೇ ದಿರಿಸನ್ನು ಬಳಸಬಹುದು. ಇದರ ಜೊತೆಗೆ, ಒಂದು ವೇಲ್‌ ತೊಟ್ಟರೆ ಅಲ್ಲಿಗೆ ಒಂದು ಪರಿಪೂರ್ಣ ಲುಕ್‌ ದೊರೆತಂತಾಗುತ್ತದೆ. 

ಬಂದಿದ್ದೆಲ್ಲಿಂದ?
ಶರಾರಾ ಭಾರತಕ್ಕೆ ಪರಿಚಯವಾಗಿದ್ದು ಮೊಘಲರ ಕಾಲದಲ್ಲಿ. ಆ ಸಮಯದಲ್ಲಿ ಅದನ್ನು ರಾಜಮನೆತನದವರು, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಮಾತ್ರವೇ ಧರಿಸುತ್ತಿದ್ದರಂತೆ. ಅಂದಹಾಗೆ 70, 80ರ ದಶಕದ ಬಾಲಿವುಡ್‌ ಸಿನಿಮಾಗಳು ಶರಾರಾಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟವು. ನಂತರವೇ ಉತ್ತರಭಾರತದ ಮನೆ ಮನೆಗಳಲ್ಲಿ ಶರಾರಾ ಜಾಗ ಕಂಡುಕೊಂಡಿದ್ದು. ಬಾಲಿವುಡ್‌ ಸಿನಿಮಾವೊಂದರಲ್ಲಿ “ಶರಾರಾ ಶರಾರಾ’ ಎಂಬ ಹಾಡೇ ತಯಾರಾಗಿತ್ತು. ಆ ಹಾಡಿಗೂ, ಶರಾರಾ ದಿರಿಸಿಗೂ ಸಂಬಂಧವಿಲ್ಲ. ಶಮಿತಾ ಶೆಟ್ಟಿ ಕುಣಿದಿದ್ದ ಆ ಹಾಡಿನಲ್ಲಿ, ಶರಾರಾ ಪದದ ಅರ್ಥ “ಬೆಂಕಿ ಕಿಡಿ’.

ವಿಶೇಷ ಸಂದರ್ಭಗಳಿಗೆ ಮಾತ್ರ…
ಕಸೂತಿ ಕೆಲಸ, ಮುತ್ತುಗಳ ಅಲಂಕಾರ ಮುಂತಾದವುಗಳಿಂದ ಗ್ರ್ಯಾಂಡ್‌ ಲುಕ್ಕನ್ನು ನೀಡುವುದರಿಂದ ಶರಾರಾವನ್ನು ದಿನನಿತ್ಯ ಬಳಸಲಾಗದು. ವಿಶೇಷ ಸಂದರ್ಭದಲ್ಲಿ ಮಾತ್ರವೇ ಹೆಚ್ಚಿನವರು ಇದನ್ನು ಬಳಸುತ್ತಾರೆ. ಇದರದ್ದೇ ಸಿಂಪಲ್‌ ವರ್ಷನ್‌ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಹೆಚ್ಚಿನ ಕಸೂತಿ ಮತ್ತು ಮುತ್ತುಗಳ ಅಲಂಕಾರ ಇರುವುದಿಲ್ಲ. ಹೀಗಾಗಿ ಅವುಗಳನ್ನು ದಿನನಿತ್ಯದ ಸಂದರ್ಭಗಳಿಗೆ ಬಳಸಬಹುದು. ಶರಾರಾ ಅನೇಕ ಪ್ರಯೋಗ, ಮಾರ್ಪಾಡುಗಳಿಗೆ ಒಳಪಡುತ್ತಲೇ ಇದೆ. ವಸ್ತ್ರ ವಿನ್ಯಾಸಕಾರರು ಶರಾರಾಗೆ ಇನ್ನಷ್ಟು ಭಾರತೀಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

Advertisement

ಮುತ್ತಿನ ಕೊಡೆ
ಶರಾರಾದ ಕೆಳಗಿನ, ಅಂಬ್ರೆಲಾ ಎಂದು ಕರೆಯಲ್ಪಡುವ ಭಾಗ ಸಾಮಾನ್ಯವಾಗಿ ಝರಿ, ಗಾಢವಾದ ಕಸೂತಿ ವಿನ್ಯಾಸಗಳು, ಮಣಿ ಮುಂತಾದವುಗಳಿಂದ ಅಲಂಕೃತಗೊಂಡಿರುತ್ತದೆ. ಹೀಗಾಗಿ, ಶರಾರಾದಲ್ಲಿ ಕೊಡೆಯ ಭಾಗವೇ ಹೆಚ್ಚು ಆಕರ್ಷಕವಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಮುತ್ತಿನ ಕೊಡೆ ಎಂದು ಕರೆದರೂ ತಪ್ಪಿಲ್ಲ ಎನ್ನಿ!

ಮದುಮಗಳ ದಿರಿಸಿದು
ಅದ್ಧೂರಿತನವನ್ನು ತೋರ್ಪಡಿಸುವುದರಿಂದ ಉತ್ತರಭಾರತದಲ್ಲಿ ಶರಾರಾವನ್ನು ಬಹುತೇಕ ಹೆಣ್ಮಕ್ಕಳು ಮದುವೆಯ ಸಂದರ್ಭದಲ್ಲಿ ಧರಿಸುತ್ತಾರೆ. ಮೆಹಂದಿ, ಆರತಕ್ಷತೆ… ಹೀಗೆ ವಿವಾಹಕ್ಕೆ ಸಂಬಂಧಿಸಿದ ಆಚರಣೆಗಳಲ್ಲಿ ಎಲ್ಲರ ಕಣ್ಣು ತಮ್ಮ ಮೇಲೆ ಬೀಳಲಿ ಎಂದು ಮದುಮಗಳು ಆಶಿಸುವುದು ಸಹಜವೇ. ಈ ಆಸೆಯನ್ನು ಪೂರೈಸಲು ಶರಾರಾ ಸೂಕ್ತವಾದ ಆಯ್ಕೆ. 

ಹವನ

Advertisement

Udayavani is now on Telegram. Click here to join our channel and stay updated with the latest news.

Next