Advertisement

ಊಟದ ಸವಿಗೆ “ಶರಣು’

07:56 PM Oct 25, 2019 | Lakshmi GovindaRaju |

ಮಧ್ಯ ಕರ್ನಾಟಕ, ಬಯಲು ಸೀಮೆಯ ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರು, ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಮುರುಘಾ ಮಠವನ್ನು ಆಯ್ದುಕೊಳ್ಳುವುದು ವಿಶೇಷ…

Advertisement

ಕೋಟೆ ನಾಡಿಗೆ ಹೋದಮೇಲೆ, ಮುರುಘಾ ಮಠದ ಊಟ ಸವಿಯದೇ ಇರಲಾದೀತೆ? ಖಂಡಿತಾ ಇಲ್ಲ. ಮಧ್ಯ ಕರ್ನಾಟಕ, ಬಯಲು ಸೀಮೆಯ ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಮುರುಘಾ ಮಠವನ್ನು ಆಯ್ದುಕೊಳ್ಳುವುದು ವಿಶೇಷ. ಮಠದಲ್ಲಿ ಸುಮಾರು 500ಕ್ಕಿಂತ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಇವರೊಟ್ಟಿಗೆ, ದುರ್ಗಕ್ಕೆ ಬರುವ ಪ್ರವಾಸಿಗರು, ಮಠದ ಭಕ್ತರೂ ಇಲ್ಲಿನ ದಾಸೋಹವನ್ನು ಆಸ್ವಾದಿಸುತ್ತಾರೆ.

ಬಾಯ್ಲರ್‌ ಜತೆಗೆ, ಕಟ್ಟಿಗೆ ಒಲೆ: ಅನುಭವ ಮಂಟಪದ ನೆಲ ಮಹಡಿಯ ಒಂದು ಭಾಗ ಪೂರ್ತಿ ಅಡುಗೆಮನೆಗೆ ಬಳಕೆಯಾಗಿದೆ. 5 ದೊಡ್ಡ ಬಾಯ್ಲರ್‌ಗಳಿವೆ. ಸಾಂಬಾರ್‌ ತಯಾರಿಸಲು ಕಟ್ಟಿಗೆ ಒಲೆಯನ್ನು ಬಳಸುವುದು ವಿಶೇಷ.

ಸುಸಜ್ಜಿತ ಊಟದ ಸಭಾಂಗಣ: ಒಮ್ಮೆಲೆ 4500 ಮಂದಿ ಕುಳಿತು ಊಟ ಮಾಡುವ ಸುಸಜ್ಜಿತವಾದ ಭೋಜನ ಸಭಾಂಗಣವಿದೆ. ವಿಶೇಷ ಚೇತನರಿಗೆ ಟೇಬಲ್‌ ವ್ಯವಸ್ಥೆ ಇದೆ. ಇಲ್ಲಿ ಪ್ರಸಾದ ಸ್ವೀಕರಿಸುವ ಎಲ್ಲರಿಗೂ ತಟ್ಟೆ, ಲೋಟ ನೀಡಲಾಗುತ್ತದೆ. ಇದಕ್ಕಾಗಿ 5 ಸಾವಿರ ತಟ್ಟೆಗಳಿವೆ.

365 ದಿನ, 3 ಹೊತ್ತೂ ಪ್ರಸಾದ!: ಮುರುಘಾ ಮಠ ಆರಂಭವಾದಾಗಿನಿಂದಲೂ ಇಲ್ಲಿ ಪ್ರಸಾದದ ವ್ಯವಸ್ಥೆ ಇದೆ. ಈಗ ಇದು ಇನ್ನಷ್ಟು ಜನಪ್ರಿಯವಾಗಿದೆ. ನಿತ್ಯವೂ ಇಲ್ಲಿ ಮುದ್ದೆಯೂಟವಿರುತ್ತದೆ. ಭಾನುವಾರ ಗೋಧಿ ಪಾಯಸ ಇರುತ್ತದೆ. ಮಠದ ಮಕ್ಕಳೂ ಸೇರಿ, ನಿತ್ಯ ಕನಿಷ್ಠ 2 ಸಾವಿರ ಜನ ಪ್ರಸಾದ ಸ್ವೀಕರಿಸುತ್ತಾರೆ. ಒಂದು ವರ್ಷದಲ್ಲಿ ಸರಾಸರಿ 5 ಲಕ್ಷ ಜನ ಮಠದ ಪ್ರಸಾದ ಸ್ವೀಕರಿಸುತ್ತಾರೆ.

Advertisement

ಭಕ್ಷ್ಯ ವಿಶೇಷ
-ನಿತ್ಯವೂ ಮುದ್ದೆ, ಅನ್ನ, ಸಾಂಬಾರು, ತಿಳಿಸಾರು.
-ಈರುಳ್ಳಿ, ಮೂಲಂಗಿ, ಸೌತೆಕಾಯಿ, ಕೋಸು- ಹೆಚ್ಚು ಬಳಕೆಯಾಗುವ ತರಕಾರಿ.

ಜನ ಎಷ್ಟೇ ಬರಲಿ…: ಕಳೆದ 30 ವರ್ಷಗಳಿಂದ ಇಲ್ಲಿ ಪ್ರತಿ ತಿಂಗಳು 5ನೇ ತಾರೀಖೀನಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಅಂದು ಭೋಜನ ಶಾಲೆಗೆ ಹೆಚ್ಚು ಕೆಲಸ. ಎಷ್ಟೇ ಜನಪ್ರವಾಹವಿದ್ದರೂ, 10 ನಿಮಿಷದಲ್ಲಿ ಅನ್ನ ಸಿದ್ಧಗೊಳ್ಳುವ ವ್ಯವಸ್ಥೆಯಿದೆ.

ಭೋಜನಕ್ಕೆ “ಶರಣು’ ಎನ್ನಿ…: ಪ್ರತಿವರ್ಷ ದಸರೆಯಲ್ಲಿ ನಡೆಯುವ 10 ದಿನಗಳ ಶರಣ ಸಂಸ್ಕೃತಿ ಉತ್ಸವದಲ್ಲಿ 2 ಲಕ್ಷ ಜನ ಪ್ರಸಾದ ಸ್ವೀಕರಿಸುತ್ತಾರೆ. ಈ ವೇಳೆ 50 ಬಾಣಸಿಗರು, 100 ಮಂದಿ ಅಡುಗೆ ಸಹಾಯಕರು, ಸ್ವತ್ಛತೆಗಾಗಿ 100 ಜನ ಕೆಲಸ ಮಾಡುತ್ತಾರೆ. ಉತ್ಸವಕ್ಕಾಗಿ ತಯಾರಾಗುವ 10 ಕ್ವಿಂಟಲ್‌ ಲಾಡು ಚಪ್ಪರಿಸಿಕೊಂಡು, ಸವಿಯುವಂಥದ್ದು.

ಸಂಖ್ಯಾಸೋಜಿಗ
1- ಕ್ವಿಂಟಲ್‌ ಬೇಳೆ ನಿತ್ಯ ಅವಶ್ಯ
10- ನಿಮಿಷದಲ್ಲಿ ಅನ್ನ ಸಿದ್ಧಗೊಳ್ಳುತ್ತೆ!
30- ಬಾಣಸಿಗರಿಂದ ನಿತ್ಯ ಅಡುಗೆ ತಯಾರಿ
20- ಸಹಾಯಕರಿಂದ ಅಡುಗೆಗೆ ನೆರವು
2000- ಮಂದಿಗೆ ನಿತ್ಯ ಭೋಜನ
4,500- ಜನ ಹಿಡಿಸುವ ಭೋಜನಶಾಲೆ
5,00,000- ಮಂದಿಯಿಂದ ಈ ವರ್ಷ ಭೋಜನ ಸ್ವೀಕಾರ

ಏನೇನು? ಎಷ್ಟೆಷ್ಟು?: ಪ್ರತಿದಿನ 1 ಕ್ವಿಂಟಲ್‌ ಬೇಳೆ, 8- 10 ಕ್ವಿಂಟಲ್‌ ಅಕ್ಕಿ, 1 ಸಾವಿರ ಮುದ್ದೆ, 50 ರಿಂದ 60 ಕೆ.ಜಿ. ಈರುಳ್ಳಿ ಅವಶ್ಯ.

ಊಟದ ಸಮಯ
-ಮಧ್ಯಾಹ್ನ 12- 3 ಗಂಟೆ
-ರಾತ್ರಿ 8- 10 ಗಂಟೆ

ವ್ಯವಸ್ಥಿತ ಮತ್ತು ಅಚ್ಚುಕಟ್ಟು ಭೋಜನ ವ್ಯವಸ್ಥೆ ನಮ್ಮದು. ಎಷ್ಟೇ ಸಾವಿರ ಭಕ್ತರು ಬಂದರೂ, ಅವರಿಗೆ ಅನ್ನ ಹಾಕುವುದು ನಮ್ಮ ಆಶಯ. ಅದಕ್ಕೆ ತಕ್ಕಂತೆ ಪರಿಣತ ಪಾಕ ಪ್ರವೀಣರು ನಮ್ಮಲ್ಲಿದ್ದಾರೆ.
-ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಪೀಠಾಧ್ಯಕ್ಷರು, ಮುರುಘಾ ಮಠ

* ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next