Advertisement

ಶರಣರ ವಚನಗಳತ್ತ ಹೊಸ ದೃಷ್ಟಿ ಅಗತ್ಯ: ಡಾ|ಕಿರಣಕುಮಾರ

08:35 AM Mar 19, 2019 | Team Udayavani |

ಧಾರವಾಡ: ಜೀವನದ ಅನುಭವದಿಂದ ಸಂದೇಶ, ತತ್ವ, ಆದರ್ಶದ ಮೌಲ್ಯ ನೀಡಿರುವ ಬಸವಾದಿ ಶರಣರ ವಚನಗಳಲ್ಲಿ ಇರುವ ವಿಷಯಗಳನ್ನು ಪೂರ್ವಾಗ್ರಹದಿಂದ ನೋಡದೇ ಹೊಸ ದೃಷ್ಟಿಯಿಂದ ಗಮನಿಸಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಮಾಜಿ ಅಧ್ಯಕ್ಷ ಡಾ|ಎ.ಎಸ್‌. ಕಿರಣಕುಮಾರ ಹೇಳಿದರು.

Advertisement

ಕವಿವಿ ಆವರಣದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ “ವಚನಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮರಸ್ಯ ಹಾಗೂ ಅರ್ಥಪೂರ್ಣ ಜೀವನ ನಡೆಸುವ ಬಗೆಯನ್ನು ಶರಣರು ತಮ್ಮ ವಚನಗಳಲ್ಲಿ ತಿಳಿಸಿದ್ದು, ಅದರಲ್ಲಿ ಅಡಗಿರುವ ಸಮಗ್ರ ಮಾಹಿತಿ ತಿಳಿಯಲು ನಾವು ನಿರಂತರ ಪ್ರಯತ್ನ ಮಾಡಬೇಕು. ಅದರಲ್ಲೂ ಕೆಲ ವಿಷಯವನ್ನು ಮೂಢನಂಬಿಕೆ ಅನ್ನುತ್ತೇವೆ.  ಆದರೆ ವಾಸ್ತವ ಹಾಗಿಲ್ಲ. ಅದರಲ್ಲಿರುವ ಧ್ಯೇಯ, ತತ್ವಗಳನ್ನು ನಾವು ಮರೆತಿದ್ದೇವೆ ಅಷ್ಟೆ. ಹೀಗಾಗಿ ಅದು ನಮಗೆ ಮೂಢನಂಬಿಕೆಯಾಗಿ ಭಾಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಹಾಗೂ ಸಾಮಾನ್ಯರು ಮುಕ್ತ ಮನಸ್ಸಿನಿಂದ ವಿಷಯವನ್ನು ನೋಡಿದಾಗ ವೈಜ್ಞಾನಿಕ ರೀತಿಯಲ್ಲಿ ಸತ್ಯ ಹೊರತರಲು ಸಾಧ್ಯವಿದೆ ಎಂದರು.

ದೇಶದಲ್ಲಿ ಜನಸಂಖ್ಯೆ ಏರುತ್ತಾ ಸಾಗಿದಂತೆ ಭೂಮಿಯಲ್ಲಿನ ಹಾಗೂ ಭೂ ಗರ್ಭದಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಮುಗಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಹಾರ ಪೂರೈಕೆ ಕಷ್ಟವಾಗುವ ಸಾಧ್ಯತೆ ಇದೆ. ಜನಸಂಖ್ಯಾ ಹೆಚ್ಚಳದಿಂದ ಜೀವ ವೈವಿಧ್ಯತೆ ನಾಶ ನಡೆದಿದ್ದು, ಇದು ನಾಶಗೊಂಡರೆ ಮನುಕುಲವನ್ನು ವಿನಾಶದಿಂದ ಪಾರು ಮಾಡಲಾಗದು. ಅದಕ್ಕಾಗಿ ಮನುಷ್ಯ ಸ್ವಾರ್ಥ ಬಿಟ್ಟು ನಿಸ್ವಾರ್ಥತೆ ತಾಳಬೇಕು ಎಂದು ಸಲಹೆ ನೀಡಿದರು.
 
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ವೀರಣ್ಣ ರಾಜೂರ ಪಾಲ್ಗೊಂಡಿದ್ದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ
ಮುಳೇಬಿಹಾಳದ ರುದ್ರೇಶ ಕಿತ್ತೂರ ಅವರು ವಚನಗಳಲ್ಲಿ ಭೂಗೋಳ ವಿಜ್ಞಾನ, ಅಥಣಿಯ ಡಾ| ಬಾಳಾಸಾಹೇಬ ಅವರು ವಚನಗಳಲ್ಲಿ ಖಗೋಳ ವಿಜ್ಞಾನ, ಅನಂತಪುರದ ಡಾ| ಜೆ. ಸದಾನಂದ ಶಾಸ್ತ್ರಿ ಅವರು ವೇಮನ ವಚನಗಳಲ್ಲಿ ಭೌತ ವಿಜ್ಞಾನ ವಿಷಯಗಳ ಕುರಿತು ವಿಷಯ ಮಂಡಿಸಿದರು. ಕೇಂದ್ರದ ನಿರ್ದೇಶಕ ಪೊ| ಕೆ.ಬಿ.ಗುಡಸಿ ಸ್ವಾಗತಿಸಿದರು. ನಯನಾ ಹಾಗೂ ಹರಿಣಿ ನಿರೂಪಿಸಿದರು.

ಮುಂದಿನ ದಿನಗಳಲ್ಲಿ ಅಂತರಿಕ್ಷ ಪ್ರವಾಸೋದ್ಯಮ
ಬರಲಿದ್ದು, ಸಾಮಾನ್ಯ ಜನರು ಬಾಹ್ಯಾಕಾಶದಲ್ಲಿ ಹಲವು
ದಿನಗಳ ಪ್ರವಾಸ ಮಾಡಬಹುದು. ಈ ಕೆಲಸ ಈಗಾಗಲೇ
ನಡೆದಿದ್ದು, ಯಶಸ್ವಿಯಾಗುವ ಸಾಧ್ಯತೆ ಇದೆ. ಇದರಿಂದ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಗೆ ಬರಲಿದೆ.
  ಡಾ| ಎ.ಎಸ್‌. ಕಿರಣಕುಮಾರ, ಇಸ್ರೋ ಮಾಜಿ ಅಧ್ಯಕ

Advertisement

ಶರಣರು, ಸಂತರು, ವಚನಕಾರರು ನಮ್ಮ ಸಂಸ್ಕೃತಿಯ ತಳಹದಿ. ಮುನುಷ್ಯನ ಆಯುಷ್ಯದಂತೆ ಭೂಮಿಗೆ ಸಹ ಆಯುಷ್ಯವಿದ್ದು, ಈಗಾಗಲೇ ಅರ್ಧ ಕಳೆದಿದೆ. ಹಿರಿಯರ ಮಾರ್ಗದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತಳಹದಿಯ ಮೇಲೆ ಸಾಮರಸ್ಯದ ಸಮಾಜ ನಿರ್ಮಿಸಬೇಕು.
  ಡಾ| ಎಚ್‌. ಹೊನ್ಮೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ

Advertisement

Udayavani is now on Telegram. Click here to join our channel and stay updated with the latest news.

Next