Advertisement

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮುಂದು

10:06 AM Jan 23, 2019 | Team Udayavani |

ರಾಯಚೂರು: ವಿಜ್ಞಾನ, ತಂತ್ರಜ್ಞಾನದ ವಿಚಾರದಲ್ಲಿ ಈ ಜಗತ್ತು ಸಾಕಷ್ಟು ಮುಂದುವರಿದಿದೆ. ಅದರಲ್ಲೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಸ್ತುತ ಭಾರತ ಶರವೇಗದಲ್ಲಿ ಸಾಗುತ್ತಿದೆ ಎಂದು ಇಸ್ರೋ ನಿಕಟಪೂರ್ವ ಅಧ್ಯಕ್ಷ ಡಾ| ಎ.ಎಸ್‌. ಕಿರಣಕುಮಾರ ಹೇಳಿದರು.

Advertisement

ಜಿಲ್ಲಾಡಳಿತ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ಸಹಯೋಗದಲ್ಲಿ ಸೋಮವಾರ ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ-ಶಿಕ್ಷಕ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಚೆಗೆ ಭಾರತ ದೇಶ ಇಡೀ ವಿಶ್ವದ ಗಮನ ಸೆಳೆಯುವಂತಹ ಸಾಧನೆ ಮಾಡುತ್ತಿದೆ. 124 ದೇಶಗಳ 200 ಉಪಗ್ರಹಗಳನ್ನು ಏಕಕಾಲಕ್ಕೆ ಕಳುಹಿಸಿ ಯಶಸ್ವಿಯಾಗಿದ್ದೇವೆ. ಇಂದು ನಮ್ಮ ದೇಶದ 49 ಉಪಗ್ರಹಗಳು ನಭದಲ್ಲಿ ಸಕ್ರಿಯವಾಗಿವೆ. 75ನೇ ಸ್ವಾತಂತ್ರ್ಯೋತ್ಸವದೊಳಗೆ ಮಾನವ ಸಹಿತ ಉಪಗ್ರಹ ಉಡಾವಣೆ ಮಾಡುವಂತೆ ಸರ್ಕಾರ ತಿಳಿಸಿದೆ. ಆ ನಿಟ್ಟಿನಲ್ಲಿ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಇಂದು ವಿಜ್ಞಾನದ ಅವಶ್ಯಕತೆ ತುಂಬಾ ಇದೆ. ಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನದಿಂದ ವಿಶ್ವವೇ ಸಂಪರ್ಕಕ್ಕೆ ಸಿಲುಕುತ್ತಿದೆ. ಅಪಾಯಗಳಿಂದ ತಪ್ಪಿಸಿಕೊಳ್ಳಲು, ಸಮಯ, ಶ್ರಮ, ಹಣ ಉಳಿಸಲು ವಿಜ್ಞಾನಿಗಳ ಪ್ರಯೋಗಗಳಿಂದ ಸಾಧ್ಯವಾಗಿದೆ. ತಂತ್ರಜ್ಞಾನದ ಪ್ರಗತಿ ನಿರಂತರವಾಗಿದೆ. ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅಗಾಧ, ಅಸಾಧ್ಯವಾದ ಸವಾಲುಗಳಿವೆ. ಚೆನ್ನಾಗಿ ಓದುವ ಮೂಲಕ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಇಂಥ ಭಾಗಕ್ಕೆ ನಿಮ್ಮಂಥ ದೊಡ್ಡ ವಿಜ್ಞಾನಿಗಳು ಬಂದಿರುವುದು ನಿಜಕ್ಕೂ ಸ್ವಾಗತಾರ್ಹ. ಇಲ್ಲಿನ ಅಧಿಕಾರಿಗಳು ಇದಕ್ಕಿಂತ ಹಿಂದುಳಿದ ಪಕ್ಕದ ಜಿಲ್ಲೆಗಳನ್ನು ನೋಡಿ ಸಮಾಧಾನ ಪಡುವ ಸ್ಥಿತಿಯಿದೆ. ನಿಮ್ಮ ಭೇಟಿಯಿಂದ ಮಕ್ಕಳಿಗೆ ವಿಜ್ಞಾನ ವಿಷಯದ ಆಸಕ್ತಿ ಮೂಡಲು ಸಹಕಾರಿಯಾಗಲಿದೆ ಎಂದರು.

Advertisement

ಮಧ್ಯಾಹ್ನ ಇಸ್ರೋ ಹಿರಿಯ ವಿಜ್ಞಾನಿ ಪಿ.ಜೆ.ಭಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ (ಕರಾವಿಪ) ರಾಜ್ಯ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಡಾ| ಕುಂಟೆಪ್ಪ ಗೌರಿಪುರ ಪ್ರಾಸ್ತಾವಿಕ ಮಾತನಾಡಿದರು.

ಪರಿಷತ್‌ ಜಿಲ್ಲಾಧ್ಯಕ್ಷ ಡಾ| ವೆಂಕಟೇಶ ದೇವರು ಅಧ್ಯಕ್ಷತೆ ವಹಿಸಿದ್ದರು. ಎಡಿಸಿ ಗೋವಿಂದ ರೆಡ್ಡಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ, ಕರಾವಿಪ ರಾಜ್ಯ ಕಾರ್ಯದರ್ಶಿ ಗಿರೀಶ ಬಿ.ಕಡ್ಲೇವಾಡ, ಸಮಿತಿ ಸದಸ್ಯ ಜಗನ್ನಾಥ ಹಲಮಡಗಿ, ಡೀನ್‌ ಪ್ರೊ| ಚಂದರಗಿ, ಡಾ| ಪ್ರಮೋದ್‌ ಕಟ್ಟಿ, ಖಜಾಂಚಿ ನಿಜಾನಂದರೆಡ್ಡಿ, ಸದಸ್ಯರಾದ ಡಾ| ವೀರೇಶ ಶೆರೆಗಾರ, ವೆಂಕಟೇಶ ಬೇವಿನಬೆಂಚಿ ಇದ್ದರು. ಕರಾವಿಪ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ರಾಯಚೂರುಕರ್‌ ಸ್ವಾಗತಿಸಿದರು. ಕಾರ್ಯದರ್ಶಿ ಬಸಪ್ಪ ಗದ್ದಿ ನಿರೂಪಿಸಿದರು. ಜಿಲ್ಲೆಯ ಆಯ್ದ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕರು, ಪಪೂ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು.

ಗಮನ ಸೆಳೆದ ಸಂವಾದ: ನಂತರ ಇಬ್ಬರೂ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು. ಈ ವೇಳೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸಿದರು. ಬಾಹ್ಯಾಕಾಶದಲ್ಲಿ ಈವರೆಗೆ ಕೈಗೊಂಡ ಕೆಲಸ, ಸಾಧನೆ, ಭವಿಷ್ಯದ ಉದ್ದೇಶ, ಸವಾಲು ಹೀಗೆ ಹತ್ತು ಹಲವು ವಿಚಾರಗಳಿಗೆ ಉತ್ತರ ನೀಡುವ ಮೂಲಕ ಮಕ್ಕಳ ಕುತೂಹಲ ತಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next