Advertisement

ಶರಣರ ವಚನ ಸಾಹಿತ್ಯ ವಿಶ್ವಮಾನ್ಯ

06:29 PM Mar 05, 2021 | Nagendra Trasi |

ವಿಜಯಪುರ: ಜಗತ್ತಿನ ಎಲ್ಲ ವಯಸ್ಕರ ಭೌತಿಕ, ಆಧ್ಯಾತ್ಮಿಕ ಜೀವನದ ವೃತ್ತಿ ರೂಪಿಸುವ ಅತ್ಯಮೂಲ್ಯ ಸಂದೇಶ ಹೊಂದಿರುವ ಶರಣ ಸಾಹಿತ್ಯ ವಿಶ್ವ ಸಾಹಿತ್ಯವಾಗಿದೆ ಎಂದು ಬಬಲೇಶ್ವರ ಬೃಹನ್ಮಠದ ಡಾ| ಮಹಾದೇವ ಶ್ರೀಗಳು ಅಭಿಪ್ರಾಯಪಟ್ಟರು. ಬಬಲೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕ ಮತ್ತು ಕದಳಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶ್ರೀಗಳು ತೃಪ್ತಿಯೊಂದಿಗೆ ಪ್ರಗತಿ ಸಾಧಿಸುವ ಹಾಗೂ ಸನ್ಮಾರ್ಗ ಬೋಧಿಸುವ ಏಕೈಕ ಸಾಹಿತ್ಯವೇ ವಚನ ಸಾಹಿತ್ಯ. ಜಾಗತಿಕ ಇತಿಹಾಸ ಪರಂಪರೆಯಲ್ಲಿ
ಶ್ರೇಷ್ಠವಾದ ಸಾರ್ಥಕ ಬದುಕನ್ನು ಬಾಳಿ ಬದುಕಿದವರು ಬಸವಾದಿ ಪ್ರಮಥರು. ನಿತ್ಯ ಸತ್ಯದ ಗುರಿಯನ್ನಿಟ್ಟುಕೊಂಡು ಅರ್ಥಪೂರ್ಣ ಬಾಳಿನ ರಹಸ್ಯ ತಮ್ಮ ಬದುಕಿನ ಮೂಲಕ ವಿಶ್ವಕ್ಕೆ ದಾರಿ ತೋರಿದವರು ಶರಣರು ಎಂದರು.

ಶ್ರೀ ಶಾಂತವೀರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪ್ರೊ| ಮಲ್ಲಿಕಾರ್ಜುನ ಅವಟಿ ಮಾತನಾಡಿ, ಶರಣರು ಅಂದು ನುಡಿದಂತೆ ನಡೆದರು. ಅನುಭವದಿಂದ ಆಡಿದ ಮಾತುಗಳು ವಚನಗಳಾಗಿ ಅಮೃತದಂತ ವಚನ ವಾಣಿಗಳಾದವು. ಶರಣರ ಅನುಭವದ ಮೂಸೆಯಿಂದ ಮೂಡಿ ಬಂದ ಅನುಭಾವದ ರಚನೆಗಳೇ ವಚನ ಸಾಹಿತ್ಯವಾಗಿ ರೂಪುಗೊಂಡಿದೆ. ಸಾತ್ವಿಕ ಜೀವನ ನಡೆಸಿ ಜಗತ್ತಿಗೆ ಮಾದರಿಯಾದ ಶರಣರ ತತ್ವೋಪದೇಶಗಳ ಚಿಂತನ-ಮಂಥನ ಮಾಡುವುದು ಪ್ರಸ್ತುತ ಅಗತ್ಯವಾಗಿದೆ. ವಚನ ಸಾಹಿತ್ಯ ಯುವ ಜನಾಂಗದವರು ಮನ-ಮನೆಗಳಿಗೆ ತಲುಪಿಸುವ ಹೊಣೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಅತಿಥಿಗಳಾದ ವಿ.ಎಸ್‌. ಪಾಟೀಲ ಮಾತನಾಡಿ, ವರ್ಣಭೇದ, ವರ್ಗಭೇದ, ಲಿಂಗಭೇದವಿಲ್ಲದ ಸರ್ವಸಮಾನತೆ ಸಮಾಜ ಕಟ್ಟಲು ಪ್ರಯತ್ನಿಸಿದ ಶರಣರು ಕಾಯಕವೇ ಕೈಲಾಸ ಎಂದರು. ಎಲ್ಲ ಕಾರ್ಯಗಳಿಗೂ ಸಮಾನ ಗೌರವ ನೀಡುವ ಅನುಭವ ಮಂಟಪದಲ್ಲಿ ನೂರೊಂದು ವೃತ್ತಿ ಮೂಲದವರನ್ನು ಕೂಡಿಸಿ ಜಾತಿ, ಭೇದ ಅಲ್ಲಗಳೆದವರು. ವ್ಯಕ್ತಿ ಕಲ್ಯಾಣದ ಜೊತೆ ಸಮಾಜ ಕಲ್ಯಾಣ ಶರಣರಿಗೆ ಮುಖ್ಯವಾಗಿತ್ತು ಎಂದರು.

ಸಮಾಜ ಸೇವಕ ಅರ್ಜುನಗೌಡ ದೇವಕ್ಕಿ ಮಾತನಾಡಿ, ಸರಳ ಜೀವನಕ್ಕೆ, ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮವನ್ನು ಸುಲಭವಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಲು ಶರಣರ ವಚನಗಳು ಹಾಗೂ ಅವರ ಬದುಕಿನ ಹಾದಿ ಮಾದರಿಯಾಗಿದೆ. ಇಂತಹ ತತ್ವಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡು ಬದುಕು ಸಾರ್ಥಕಗೊಳಿಸಬೇಕು ಎಂದರು.

Advertisement

ತಾಲೂಕು ಶರಣ ಸಾಹಿತ್ಯ ಪರಿಷತ್‌ ಯುವ ಘಟಕದ ವೇದಿಕೆ ಅಧ್ಯಕ್ಷರಾಗಿ ಸುರೇಶ ಗೌಡಪ್ಪಗೋಳ ಹಾಗೂ ಕದಳಿ ವೇದಿಕೆ ಅಧ್ಯಕ್ಷರಾಗಿ ಜಯಶ್ರೀ ವೀರನಗೌಡ ಪಾಟೀಲ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ರಾಜಶೇಖರ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶರಣ ಸಾಹಿತ್ಯ ಪರಿಷತ್‌ ಬಬಲೇಶ್ವರ ತಾಲೂಕು ಅಧ್ಯಕ್ಷ ಎಲ್‌.ಪಿ. ಬಿರಾದಾರ, ಗ್ರಾಪಂ ಅಧ್ಯಕ್ಷೆ ಬೌರಮ್ಮ ಬೂದಿಹಾಳ, ನಿವೇದಿತಾ ಮರ್ಯಾಣಿ, ಮಲ್ಲು ಕನ್ನೂರ, ಅಮರೇಶ ಸಾಲಕ್ಕಿ, ಎಸ್‌.ಆರ್‌. ತಮಗೊಂಡ, ಕೆ.ಆರ್‌. ಅರಕೇರಿಮಠ, ಎಂ.ಎಸ್‌. ಬಿರಾದಾರ, ಅಪ್ಪಾಸಾಬ ಬಿರಾದಾರ, ಸದಾಶಿವ ಹವಾಲ್ದಾರ, ಗೂಳಪ್ಪ ಯರನಾಳ, ನೀಲಕಮಲ ಪಾಟೀಲ, ಮಹಾದೇವಿ ಜಂಗಮಶೆಟ್ಟಿ ಇತರರು ಇದ್ದರು. ಬಸನಗೌಡ ಬಿರಾದಾರ ಸ್ವಾಗತಿಸಿದರು. ವಜೀರ ಆಲಗೂರ ನಿರೂಪಿಸಿದರು. ಮಲ್ಲಿಕಾರ್ಜುನ ತೊದಲಬಾಗಿ ವಂದಿಸಿದರು.

ಮನಕ್ಕೆ ಮುದ ನೀಡುವ ಸತ್ವಭರಿತ ತತ್ವಗಳು ಇತಿಹಾಸದಲ್ಲಿ ಅತ್ಯಂತ ಸುಲಭದಲ್ಲಿ ಪಚನವಾಗುವ ಶರಣರ ವಚನಗಳು ಅಂದು ಇಂದು ಹಾಗೂ ಎಂದೆಂದಿಗೂ ಪ್ರಸ್ತುತ. ಇದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಿಚಾರವಾಗಿದೆ.

ಅಭಿನವ ಮುರುಘೇಂದ್ರ ಶ್ರೀ, ಮಮದಾಪುರ

Advertisement

Udayavani is now on Telegram. Click here to join our channel and stay updated with the latest news.

Next