ಮುನವಳ್ಳಿ: ಸಂವಿಧಾನ ರಚನೆಗೆ ಮೂಲ ಪರಿಕಲ್ಪನೆ ಇರುವುದು ಅನುಭವ ಮಂಟಪದ ಕಾರಣೀಕರ್ತರಾದ ಶಿವಶರಣರು. ಈಗಿನ ಲೋಕಸಭೆ ಪರಿಕಲ್ಪನೆ ಆಗಿನ ಶಿವಶರಣರು ನಮಗೆಲ್ಲ ನೀಡಿದ್ದರು ಎಂದು ಅವರಾದಿಯ ಶ್ರೀ ಶಿವಮೂರ್ತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸೋಮಶೇಖರ ಮಠದ ಲಿಂ| ಬಸವಲಿಂಗ ಮಹಾಸ್ವಾಮಿಗಳ 66ನೇ ಜಯಂತ್ಯುತ್ಸವ ನಿಮಿತ್ತ ಜರುಗುತ್ತಿರುವ 4ನೇ ದಿನದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಮಹಾತ್ಮರ ನುಡಿಗಳು ಜೀವನದಲ್ಲಿ ಸನ್ಮಾರ್ಗ ತೋರಿ ನಮ್ಮನ್ನು ಮುಕ್ತರನ್ನಾಗಿ ಮಾಡುತ್ತವೆ. ಮಹಾತ್ಮರ ಸೇವೆ ಮಾಡುತ್ತ ಅವರ ಕಾರುಣ್ಯ ಪಡೆದುಕೊಳ್ಳಬೇಕು ಎಂದರು. ಮಾದನಹಿಪ್ಪರಗಿ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿದರು.
ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಗಿಡಮರ ಬೆಳೆಸುವುದರಿಂದ ಸಾಕಷ್ಟು ಆಮ್ಲಜನಕ, ಹಣ್ಣು- ಹಂಪಲು, ನೆರಳು ಸಿಗುತ್ತದೆ. ವೃಕ್ಷ ಬೆಳೆಸಿ ಅವುಗಳ ಮೂಲಕ ಜೀವನ ಸಾರ್ಥಕ ಮಾಡಿಕೊಂಡ ಸಾಲುಮರದ ತಿಮ್ಮಕ್ಕ ಮೊದಲಾದವರು ನಮಗೆ ಆದರ್ಶ ಎಂದರು.
ನೇತೃತ್ವ ವಹಿಸಿದ್ದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳಿಗೆ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು ಗುರುವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೀರೇಶ ಬ್ಯಾಹಟ್ಟಿ, ಉಮೇಶ ಬಡಿಗೇರ, ಮಹಾದೇವ ಅಂಗಡಿ, ಅಶೋಕ ಬಡಿಗೇರ, ರವಿಕುಮಾರ ಅಣ್ಣಿಗೇರಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಯೋಗಪಟುಗಳಿಂದ ಯೋಗ ಪ್ರದರ್ಶನ, ದೇಶಭಕ್ತಿ ಗೀತೆ ನೃತ್ಯ ಪ್ರದರ್ಶನ ಜರುಗಿತು. ಬಿ.ಬಿ. ಹುಲಿಗೊಪ್ಪ ಸ್ವಾಗತಿಸಿದರು. ಗಂಗಾಧರ ಗೊರಾಬಾಳ ನಿರೂಪಿಸಿದರು. ಮಂಜುನಾಥ ಭಂಡಾರಿ ವಂದಿಸಿದರು.