-ನೀವು ಸೂಕ್ಷ್ಮವಾಗಿ ಗಮನಿಸಿದರೆ ಶರಣ್ ಒಂದರ ಹಿಂದೊಂದರಂತೆ ತಮ್ಮ ಹಿಟ್ ಚಿತ್ರದ ಟೈಟಲ್‌ಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಗೊತ್ತಾಗುತ್ತದೆ. ಹಾಗೆ ನೋಡಿದರೆ ಅವರಿಗೆ ಗೆಲುವು ಸಿಕ್ಕಿದ್ದು ಕೂಡಾ ಆ ಟೈಟಲ್‌ಗಳಿಂದಲೇ. “ರ್‍ಯಾಂಬೋ’, “ವಿಕ್ಟರಿ’ ಹಾಗೂ “ಅಧ್ಯಕ್ಷ’ ಈ ಮೂರು ಚಿತ್ರಗಳು ಶರಣ್‌ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದ್ದವು. ಈಗ ಅದರ ಮುಂದುವರಿದ ಭಾಗಕ್ಕೆ ಶರಣ್ ಶರಣಾಗಿದ್ದಾರೆನ್ನಬಹುದು. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಹಾಗೆ ಮುಂದುವರಿದ ಭಾಗದಂತೆ ಬಂದ ಚಿತ್ರ ಶರಣ್‌ಗೆ ಮತ್ತೆ ಗೆಲುವು ಕೊಟ್ಟಿದೆ. ಒಂದು ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿದ್ದ ಶರಣ್‌ಗೆ “ರ್‍ಯಾಂಬೋ-2’ಕೈ ಹಿಡಿಯಿತು. ಈಗ “ವಿಕ್ಟರಿ-2′ ಸರದಿ. ಈ ಚಿತ್ರ ಕೂಡಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹಾಗಾದರೆ, ಶರಣ್‌ಗೆ ಸಿಕ್ವೇಲ್‌ಗಳು ಕೈ ಹಿಡಿಯುತ್ತಿವೆಯಾ ಎಂದರೆ, “ಗೊತ್ತಿಲ್ಲ’ ಎಂಬ ಉತ್ತರ ಶರಣ್‌ರಿಂದ ಬರುತ್ತದೆ.
Advertisement
“”ರ್‍ಯಾಂಬೋ-2′ ಆಗಲಿ, “ವಿಕ್ಟರಿ-2′ ಆಗಲಿ ಅಥವಾ “ಅಧ್ಯಕ್ಷ ಇನ್ ಅಮೆರಿಕಾ’ ಆಗಲಿ, ನಾವು ಪ್ಲ್ರಾನ್ ಮಾಡಿ ಇಟ್ಟ ಶೀರ್ಷಿಕೆಗಳಲ್ಲ. ಅದಾಗಿಯೇ ಆಗಿದ್ದು. ಸುಖಾಸುಮ್ಮನೆ ಮುಂದುವರಿದ ಭಾಗ ಎಂದು ಬಿಂಬಿಸಿದರೆ ಅರ್ಥವಿಲ್ಲ. ಈಗ “ವಿಕ್ಟರಿ-2′ ಬಗ್ಗೆ ಹೇಳ್ಳೋದಾದರೆ ತರುಣ್ ಮಾಡಿದ ಕಥೆಯನ್ನು ನೋಡುತ್ತಿದ್ದಂತೆ, “ವಿಕ್ಟರಿ’ಯ ಪಾತ್ರಗಳು, ಛಾಯೆ ಕಾಣುತ್ತಿತ್ತು. ಹಲವು ಅಂಶಗಳು ಹಿಂದಿನ ಚಿತ್ರಗಳ ಸನ್ನಿವೇಶ, ಸಂದರ್ಭವನ್ನು ಆ ಕಾರಣದಿಂದ “ವಿಕ್ಟರಿ-2′ ಎಂದಿಟ್ಟೆವು. ಇನ್ನು, “ಅಧ್ಯಕ್ಷ ಇನ್ ಅಮೆರಿಕಾ’ ಎಂಬುದು ಆ ನಿರ್ದೇಶಕರೇ ಫಿಕ್ಸ್ ಮಾಡಿರುವ ಟೈಟಲ್. ಇಲ್ಲಿ ನನ್ನದೇನೂ ಪಾತ್ರವಿಲ್ಲ’ ಎನ್ನುತ್ತಾರೆ ಶರಣ್. ಸೀಕ್ವೆಲ್‌ಗಳು ತನಗೆ ಗೆಲುವು ತಂದುಕೊಡುತ್ತವೆ ಎಂಬುದನ್ನು ಶರಣ್ ಒಪ್ಪಿಕೊಳ್ಳುತ್ತಾರೆ. “ಅದೇನೋ ಗೊತ್ತಿಲ್ಲ, ನನ್ನ ಮುಂದುವರಿದ ಭಾಗದ ಟೈಟಲ್‌ಗಳಿರುವ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ ಮತ್ತು ಆ ಚಿತ್ರಗಳು ನನಗೆ ಗೆಲುವು ತಂದುಕೊಡುತ್ತವೆ. ಈಗಾಗಲೇ ಜನ “ರ್‍ಯಾಂಬೋ-2′ ನ ಇಷ್ಟಪಟ್ಟಿದ್ದಾರೆ. ಈಗ ಈ “ವಿಕ್ಟರಿ-2′ ಬಗ್ಗೆಯೂ ಅಪಾರ ನಿರೀಕ್ಷೆ. ನಿರೀಕ್ಷೆ ಹೆಚ್ಚಾದಷ್ಟು ಭಯ ಜಾಸ್ತಿ’ ಎನ್ನುತ್ತಾರೆ.
Related Articles
Advertisement