ದಾವಣಗೆರೆ: ನಾವು ಕುರುಬ ಸಮಾಜಕ್ಕೆ ಸ್ವಾಮೀಜಿಯಾಗಲು ದಿ| ಕೆ. ಮಲ್ಲಪ್ಪನವರೇ ಕಾರಣ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಮರಿಸಿದರು.
ನಗರದ ಶ್ರೀ ಬೀರೇಶ್ವರ ಭವನದಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ ದಿ| ಮಲ್ಲಪ್ಪನವರ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 199ರಲ್ಲಿ ನಮ್ಮ ತಂದೆಯವರಿಗೆ ಹೇಳಿ ದತ್ತು ಪಡೆದರು ಹಾಗೂ ಅಂದಿನ ದಿನ ಮಲ್ಲಪ್ಪನವರು ನಮ್ಮ ತಂದೆಗೆ ಬರೆದ ಪತ್ರವೇ ನಾವು ಜಗದ್ಗುರುಗಳಾಗಲು ಕಾರಣವಾಯಿತು ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕಾಗಿನೆಲೆ ಕನಕ ಗುರುಪೀಠ ಸ್ಥಾಪನೆಗೆ ಮಲ್ಲಪ್ಪನವರ ಶ್ರಮವನ್ನು ಮರೆಯುವಂಥದ್ದಲ್ಲ. ಅವರು ಸದಾ ಸಮಾಜದ ಶೋಷಿತರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಬಡ ಮಕ್ಕಳಿಗೆ ಮೃಷ್ಟಾನ್ನ ಭೋಜನ ಮಾಡಿಸಲು ಸದಾ ಅವರ ಮನಸ್ಸು ಮಿಡಿಯುತ್ತಿತ್ತು ಎಂದು ಹೇಳಿದರು. ಚಂದ್ರಗಿರಿ ಅಥಣಿ ಮಠದ ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ, ಕೆ. ಮಲ್ಲಪ್ಪ ಜನ ಸೇವಕರಾಗಿ ಮುಕ್ತಿ ಹೊಂದಿದ್ದಾರೆ. ಜನಸೇವೆ, ಸಮಾಜಸೇವೆಯೇ ದೇವರ ಸೇವೆಯೆಂದು ತಿಳಿದ ಕಾಯಕಯೋಗಿಯಾಗಿದ್ದರು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ| ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಮಲ್ಲಪ್ಪನವರು ಸರಳ ಸಜ್ಜನಿಕೆಯ ನಾವೂ ಬದುಕಲ್ಲಿ ರೂಢಿಸಿಕೊಳ್ಳಬೇಕು ಎಂದರು. ನಗರ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ, ಕೆ. ಮಲ್ಲಪ್ಪನವರ ಒಡನಾಡಿ ಬಳ್ಳಾರಿ ಷಣ್ಮುಖಪ್ಪ ಮಾತನಾಡಿ, ಇಂದು ನಾವು ಸಮಾಜದ ಮಹಾನ್ ಚೇತನವನ್ನು ಕಳೆದುಕೊಂಡಿದ್ದೇವೆ. ಅವರು ಸರಳ ಸಜ್ಜನಿಕೆಯ ಗಾಂಧಿವಾದಿಯಾಗಿದ್ದರು ಎಂದು ಹೇಳಿದರು.
ದೂಡಾ ಮಾಜಿ ಅಧ್ಯಕ್ಷ ದಾಸಕರಿಯಪ್ಪ, ನಗರ ಕುರುಬ ಸಂಘದ ಉಪಾಧ್ಯಕ್ಷ ಗೌಡ್ರು ಚನ್ನಬಸಪ್ಪ ಮತ್ತು ವಾರ್ತಾ ಇಲಾಖೆಯ ನಿವೃತ್ತ ವಾರ್ತಾಧಿಕಾರಿ ಎಂ. ಕರಿಯಪ್ಪ ಮಲ್ಲಪ್ಪನವರೊಂದಿಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡರು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಮಾಜಿ ಮೇಯರ್ ಎಚ್.ಪಿ .ಗೋಣಪ್ಪ, ಜೆ.ಕೆ. ಕೊಟ್ರಬಸಪ್ಪ , ಮಲ್ಲಪ್ಪನವರ ಪುತ್ರ ಕೆ. ವಿವೇಕ್, ಅಳಿಯ ಕೆ. ಓಂಕಾರಪ್ಪ, ಜಿಪಂ ಮಾಜಿ ಅಧ್ಯಕ್ಷ ದ್ಯಾಮಣ್ಣ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾಕ್ಷಪ್ಪ, ಕಾರ್ಯದರ್ಶಿ ಮಳಲ್ಕೆರೆ ಎಸ್.ಎಚ್. ಪ್ರಕಾಶ್, ಉಪಾಧ್ಯಕ್ಷ ಹಾಲೇಕಲ್ ಮಹಾನಗರ ಪಾಲಿಕೆ ಸದಸ್ಯರಾದ ಜೆ.ಎನ್. ಶ್ರೀನಿವಾಸ್, ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್, ದೇವರಮನಿ ಶಿವಕುಮಾರ್, ಇಟ್ಟಿಗುಣಿ ಮಂಜುನಾಥ್, ಸಮಾಜದ ಮುಖಂಡರಾದ ಕುಣೆಬೆಳಕೆರೆ ದೇವೇಂದ್ರಪ್ಪ, ಬಿ. ದಿಲ್ಲೇಪ್ಪ, ಎಚ್.ಜಿ. ಸಂಗಪ್ಪ, ಬಿ. ಲಿಂಗರಾಜು, ಸಾಯಿನಾಥ, ತಿರುಕಪ್ಪ, ರೇವಣ್ಣ, ಮಾಜಿ ಮೇಯರ್ ಎನ್.ಎನ್. ಗುರುನಾಥ್ ಇನ್ನಿತರರು ಉಪಸ್ಥಿತದ್ದರು.