ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ ಫೆ.19ರಂದು ನೆರವೇರಲಿದೆ. ಕೋವಿಡ್‌ನಿಂದ ಶ್ರೀಮಠದ ಸಾಂಪ್ರದಾಯಿಕ ರಥೋತ್ಸವವನ್ನು ಸರಕಾರದ ಆದೇಶದಂತೆ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ರಥೋತ್ಸವವು ರಥಬೀದಿಯಲ್ಲಿ ಜಗದ್ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಸರಕಾರದ ಆದೇಶದಂತೆ ನಿಯಮಗಳನ್ನು ಪಾಲಿಸಬೇಕೆಂದು ಶ್ರೀಮಠದ ಆಡಳಿತಾಧಿಕಾರಿ ಡಾ| ಗೌರಿಶಂಕರ್ ತಿಳಿಸಿದ್ದಾರೆ.
ದೇವಿಗೆ ನಡೆಸುವ ಉತ್ಸವ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಶ್ರೀ ಶಾರದಾಂಬಾ ಮಹಾರಥೋತ್ಸವ ಅನೇಕ ಶತಮಾನಗಳಿಂದ ನಡೆಯುತ್ತಿರುವ ಆಗಮೋಕ್ತ ವಿಧಾನದಂತೆ ಪ್ರತಿವರ್ಷ ನಡೆಯುವ ಉತ್ಸವವಾಗಿದೆ.
ರಥೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 15ರಂದು ಶ್ರೀಶಕ್ತಿ ಗಣಪತಿ ಸನ್ನಿಧಿಯಲ್ಲಿ ಪೂಜೆ ಹಾಗೂ ಪ್ರಾರ್ಥನೆ; 16ರಂದು ಧ್ವಜಾರೋಹಣ, ಜಪ-ಪಾರಾಯಣ ಪ್ರಾರಂಭ, ಸಹಸ್ರಮೋದಕ ಗಣಪತಿ ಹೋಮ, ಯಾಗಶಾಲಾ ಪ್ರವೇಶ, ಜಗದ್ಗುರುಗಳಿಂದ ಶತಚಂಡೀ ಮಹಾಯಾಗದ ಪ್ರಯುಕ್ತ ಸಂಕಲ್ಪ ,ಚಂಡೀಪಾರಾಯಣ; 17ರಂದು ಚಂಡಿಪಾರಾಯಣ, ಶ್ರೀಬ್ರಹ್ಮದೇವರಲ್ಲಿ ವಿಶೇಷ ಪೂಜೆ, ಮಂಗಳಾರತಿ, ಬ್ರಹ್ಮಸಂತರ್ಪಣೆ ಹಾಗೂ ಬೀದಿ ಉತ್ಸವ; 18ರಂದು ಚಂಡೀಪಾರಾಯಣ, ಬೆಳಗ್ಗೆ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಿಂದ ಶ್ರೀ ಭವಾನಿ ಅಮ್ಮನವರು ಶ್ರೀ ಶಾರದಾ ಸನ್ನಿ ಧಿಗೆ ಉತ್ಸವದಲ್ಲಿ ಚಿತ್ತೈಸುವುದು, ಮಧ್ಯಾಹ್ನ 12ಕ್ಕೆ ಜಗದ್ಗುರು ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ವಿಶೇಷ ಪೂಜೆ, ಮಹಾಮಂಗಳಾರತಿ, ಸುವಾಸಿನಿ ಪೂಜೆ ಮತ್ತು ಸಂತರ್ಪಣೆ, ಸಂಜೆ ಶ್ರೀ ಶಾರದಾಂಬಾ ಬೀದಿ ಉತ್ಸವ; 19ಕ್ಕೆ ಚಂಡೀ ಪಾರಾಯಣ, ಶ್ರೀ ಶಾರದಾಂಬಾ ರಥೋತ್ಸವ; 20ರಂದು ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶತಚಂಡೀಯಾಗದ ಪೂರ್ಣಾಹುತಿ, ಓಕುಳಿ ಉತ್ಸವ, ಸಂಜೆ ಬೀದಿ ಉತ್ಸವ ಹಾಗೂ ಧ್ವಜಾರೋಹಣ ಹಾಗೂ 21ರಂದು ಮಹಾಸಂಪ್ರೋಕ್ಷಣೆಯೊಂದಿಗೆ ಮಹಾರಥೋತ್ಸವ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.