ಮೈಸೂರು: ಹಾಜರಾತಿ ವಿಷಯದಲ್ಲಿ ಶಾರದಾ ವಿಲಾಸ ಕಾಲೇಜು ಆಡಳಿತ ಮಂಡಳಿ ತಾರತಮ್ಯ ಧೋರಣೆ ಅನುಸರಿತ್ತಿದೆ ಎಂದು ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಕಟ್ಟಡ ಏರಿ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ ಹಾಗೂ ವಿಷಯವಾರು ಉಪನ್ಯಾಸಕರನ್ನೂ ಸಹ ನೇಮಿಸಿಲ್ಲ. ಇದರ ಜತೆಗೆ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಪರೀಕ್ಷಾ ಪ್ರವೇಶಾತಿ ಪತ್ರ ನೀಡಲಾಗುತ್ತಿದ್ದು, ಆ ಮೂಲಕ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.
ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳ ಹಾಜರಾತಿ ಶೇ.75 ಇರಬೇಕು. ಆದರೆ, ತರಗತಿಗೆ ಬಾರದ ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಪೂರ್ಣ ಹಾಜರಾತಿ ನೀಡಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ಸ್ಥಳೀಯ 125 ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ವಿದ್ಯಾರ್ಥಿಗಳು ಕಾಲೇಜಿನ ಕಟ್ಟಡವನ್ನೇರಿ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಲಕ್ಷ್ಮಿಪುರಂ ಪೊಲೀಸರು ವಿದ್ಯಾರ್ಥಿಗಳನ್ನು ಕಟ್ಟಡದಿಂದ ಕೆಳೆಗಿಳಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರಾದ ರಾಜೇಶ್ವರಿ, ನಾವು ಎಷ್ಟು ತರಗತಿ ತೆಗೆದುಕೊಂಡಿದ್ದೇವೆ, ಅದರ ಆಧಾರದ ಮೇಲೆ ಹಾಜರಾತಿಯನ್ನು ಶೇಕಡವಾರು ಪರಿಗಣಿಸಿ ಪರೀಕ್ಷೆಗೆ ಪ್ರವೇಶ ಪತ್ರ ನೀಡಲಾಗಿದೆ.
ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾನಿಲಯ ಹಾಜರಾತಿ ವಿಚಾರವಾಗಿ ನೀಡಿರುವ ಸೂಚನೆಯನ್ನು ನಾವು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದೇವೆ ಎಂದರು. ವಿದ್ಯಾರ್ಥಿಗಳಾದ ಜಯಚಂದ್ರ, ಪರಂಜ್ಯೋತಿ, ಸುರೇಶ್, ದೀಪ್ತಿ ಸಾಗರ್, ಶಶಿ, ಮಹೇಶ್ವರಿ, ಲಾವಣ್ಯ ಸೇರಿದಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.