ನವದೆಹಲಿ: ಜನತಾ ದಳ (ಸಂಯುಕ್ತ)ದ ಮಾಜಿ ಅಧ್ಯಕ್ಷ ಶರದ್ ಯಾದವ್ 15 ದಿನದೊಳಗೆ ನವದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕೆಂದು ದೆಹಲಿ ಹೈಕೋರ್ಟ್ ಮಂಗಳವಾರ (ಮಾರ್ಚ್ 15) ಸೂಚಿಸಿದ್ದು, 2017ರಲ್ಲಿ ಯಾದವ್ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ನಂತರವೂ ಸರ್ಕಾರಿ ಬಂಗಲೆಯಲ್ಲಿ ಉಳಿಯುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಭಾರತ ರಷ್ಯಾದ ಕಡಿತ ದರದ ಕಚ್ಛಾ ತೈಲ ಖರೀದಿಸಿದರೆ ಅಮೆರಿಕದ ನಿರ್ಬಂಧ ಉಲ್ಲಂಘನೆಯಾಗಲ್ಲ…
15 ದಿನದೊಳಗೆ ತುಘಲಕ್ ರಸ್ತೆಯಲ್ಲಿರುವ 7 ನಂಬರ್ ಬಂಗಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕೆಂದು ಹೈಕೋರ್ಟ್ ಪೀಠದ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ಜಸ್ಟೀಸ್ ನವೀನ್ ಚಾವ್ಲಾ ಶರತ್ ಯಾದವ್ ಗೆ ನಿರ್ದೇಶನ ನೀಡಿದ್ದಾರೆ.
ಶರದ್ ಯಾದವ್ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಐದು ವರ್ಷಗಳಾಗಿವೆ. ಅರ್ಜಿಯನ್ನು ಇತ್ಯರ್ಥಪಡಿಸುವವರೆಗೆ ಯಾದವ್ ಅವರು ತಮ್ಮ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಲು ಈ ಮೊದಲು ಮಧ್ಯಂತರ ಆದೇಶದಲ್ಲಿ ಅನುಮತಿ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
ಯಾದವ್ ವಾಸವಾಗಿರುವ ಬಂಗಲೆಯನ್ನು ಈಗಾಗಲೇ ಹಾಲಿ ಸಚಿವರೊಬ್ಬರಿಗೆ ನಿಗದಿಪಡಿಸಲಾಗಿದೆ. ಅವರು ಹಲವಾರು ತಿಂಗಳಿನಿಂದ ಕಾಯುತ್ತಿರುವುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ ನಮ್ಮ ಕಕ್ಷಿದಾರ(ಯಾದವ್)ರನ್ನು ಅನರ್ಹಗೊಳಿಸಿರುವುದು ಕಾನೂನು ಬದ್ಧವಾಗಿಲ್ಲ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ 2022ರ ಜುಲೈ 7ರಂದು ಮುಕ್ತಾಯಗೊಳ್ಳಲಿದೆ. ಅಷ್ಟೇ ಅಲ್ಲ ಯಾದವ್ ಅನಾರೋಗ್ಯಕ್ಕೊಳಗಾಗಿದ್ದು, ಅವರು ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ಯಾದವ್ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.