ಹೊಸದಿಲ್ಲಿ : 2019ರಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ, ಮತ್ತು ಲೋಕಸಭೆ ಚುನಾವಣೆಗಳಿಗಾಗಿ ಕಾಂಗ್ರೆಸ್ ಪಕ್ಷದ ಜತೆಗೆ ಮಹಾ ಮೈತ್ರಿಕೂಟವನ್ನು ರಚಿಸುವುದನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ದೃಢಪಡಿಸಿದ್ದಾರೆ.
ಈ ವಿಷಯವನ್ನು ಟ್ವಿಟರ್‌ನಲ್ಲಿ ದೃಢಪಡಿಸಿರುವ ಪವಾರ್, 2019 ಲೋಕಸಭಾ ಚುನಾವಣೆಗಾಗಿ ಎಲ್ಲ ವಿರೋಧ ಪಕ್ಷಗಳು ಮಹಾಘಟಬಂಧನ ರಚಿಸಲು ನಿರ್ಧರಿಸಿವೆ ಎಂದು ಹೇಳಿದ್ದಾರೆ.
ಎನ್‌ಸಿಪಿ, ಕಾಂಗ್ರೆಸ್ ಮಾತ್ರವಲ್ಲದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಎಲ್ಲ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಲಾಗುವುದು ಎಂದು ಪವಾರ್ ಹೇಳಿದ್ದಾರೆ.
ಸೀಟು ಹಂಚಿಕೆ ಸಂಬಂಧ ಉದ್ಭವಗೊಳ್ಳುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಉಭಯ ಪಕ್ಷಗಳ ನಾಯಕತ್ವ ಸರಿಪಡಿಸಲಿದೆ ಎಂದು ಪವಾರ್ ಮರಾಠಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಮಹಾ ಘಟಬಂಧನವನ್ನು ರೂಪಿಸುವ ನಿಟ್ಟಿನಲ್ಲಿ ಎಲ್ಲ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಬಲಿಷ್ಠವಾಗಿದೆಯೋ ಆ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ಕೊಡಲಾಗುವುದು; ಉಳಿದ ಪಕ್ಷಗಳು ಅದನ್ನು ಬೆಂಬಲಿಸುವುವು ಎಂದು ಪವಾರ್ ಹೇಳಿದರು.
ಭಾರತೀಯ ಜನತಾ ಪಕ್ಷವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಹಣಿಯಬೇಕಾಗಿ ಎಂಬುದನ್ನು ಆಂಧ್ರ ಪ್ರದೇಶದ ಸಿಎಂ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ತಿಂಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಪವಾರ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿದುದರ ಫಲಶ್ರುತಿ ಎಂಬಂತೆ ಈ ಬೆಳವಣಿಗೆ ನಡೆದಿದೆ.