ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿ ಹರಡಿಕೊಂಡಿರುವ “ಕಾಸ್ಮೋಪಾಲಿಟಿನ್’ ವಿಧಾನಸಭಾ ಕ್ಷೇತ್ರ ಶಾಂತಿನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಹ್ಯಾಟ್ರಿಕ್ ಸಾಧಿಸಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ 4ನೇ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ, ಸತತ ಸೋಲಿನ ಹೊರತಾಗಿಯೂ ಬಿಜೆಪಿ ಇಲ್ಲಿ ಪ್ರಬಲ ಸೆಣಸಾಟ ನಡೆಸುತ್ತಿದೆ.
ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ್ ಈ ಬಾರಿ ಮತದಾರರು ತಮ್ಮ ಕೈಹಿಡಿಯಲಿದ್ದು, ಕ್ಷೇತ್ರದಲ್ಲಿ ಕಮಲ ಅರಳಿಸುವ ಉಮೇದಿನಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯಿ ಕಣದಲ್ಲಿ ಒಂದಿಷ್ಟು ಸದ್ದು ಮಾಡುತ್ತಿದ್ದಾರೆ. ಆದರೆ, ಆ ಸದ್ದು ಅವರನ್ನು ಗೆಲುವಿನ ದಡ ಸೇರಿಸಲು ಸಾಕಾಗಲ್ಲ ಅನ್ನುವುದೂ ಅವರಿಗೆ ಮನದಟ್ಟು ಆಗಿದೆ. ಜೆ
ಡಿಎಸ್ ಅಭ್ಯರ್ಥಿ ಸ್ಪರ್ಧೆಗೆ ಮಾತ್ರ ಸೀಮಿತವಾದಂತಿದೆ. ಉಳಿದಂತೆ ಕಣದಲ್ಲಿ ಬೇರೆ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ 10 ಮಂದಿ ಇದ್ದಾರೆ. ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2008ರಿಂದ ಇಲ್ಲಿವರೆಗೆ ಸತತವಾಗಿ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಗೆದ್ದಿದ್ದಾರೆ. ಮೂರು ಬಾರಿಯೂ ಅವರಿಗೆ ಪ್ರತಿಸ್ಪರ್ಧಿ ಬದಲಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಡಿ.ಯು ಮಲ್ಲಿಕಾರ್ಜುನ, 2013ರಲ್ಲಿ ಡಿ. ವೆಂಕಟೇಶಮೂರ್ತಿ, 2018ರಲ್ಲಿ ಕೆ. ವಾಸುದೇವಮೂರ್ತಿ ಇದ್ದರು.
ಈ ಬಾರಿ ಕೆ. ಶಿವಕುಮಾರ್ ಪ್ರತಿಸ್ಪರ್ಧಿ ಆಗಿದ್ದಾರೆ. ಈ ಬಾರಿ ಬಿಜೆಪಿಯಿಂದ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಕ್ರೈಸ್ತ ಮುಖಂಡರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಗೆ ಮನವಿ ಮಾಡಿದ್ದರು. ಆದರೆ, ಟಿಕೆಟ್ ಕೊಟ್ಟಿಲ್ಲ. ಈ ಮಧ್ಯೆ ಕ್ರೈಸ್ತ ಸಮುದಾಯದವರೇ ಆಗಿರುವ ಕೆ. ಮಥಾಯಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದು, ಕ್ರೈಸ್ತರು ತಮ್ಮತ್ತ ವಾಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕ್ರೈಸ್ತ ಸಮುದಾಯದ ರಾಜಕೀಯ ತೀರ್ಮಾನ ಬೆರೆಯೇ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕಾಂಗ್ರೆಸ್‌ಗೆ ಅಭಿವೃದ್ಧಿಯೇ ಅಸ್ತ್ರ: ಹಳೆಯ ಮತ್ತು ಪ್ರತಿಷ್ಠಿತ ಕ್ಷೇತ್ರವಾಗಿರುವ ಶಾಂತಿನಗರದಲ್ಲಿ ಬ್ರಿಗೇಡ್ ರಸ್ತೆ, ಎಂಜಿ. ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳು ಸೇರುತ್ತವೆ. ಇಲ್ಲದೇ ಅತ್ಯಂತ ಜನದಟ್ಟಣೆಯ ಕ್ಷೇತ್ರವೂ ಹೌದು. ಕನ್ನಡ, ತಮಿಳು, ತೆಲುಗು, ಮಲೆಯಾಳಿ ಸೇರಿದಂತೆ ನಾನಾ ಭಾಷಿಕರು ಇಲ್ಲಿ ನೆಲೆಸಿದ್ದಾರೆ. ಸರ್ವರೊಂದಿಗೂ ಸಲ್ಲುವ ಎನ್.ಎ. ಹ್ಯಾರಿಸ್ ಅವರಿಗೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯೇ ಪ್ರಮುಖ ಅಸ್ತ್ರವಾಗಿದ್ದು, ಜೊತೆಗೆ ಅಲ್ಪಸಂಖ್ಯಾತರ ಬಾಹುಳ್ಯದ ಕಾರಣಕ್ಕೆ ಆ ಸಮುದಾಯದವರ ಮತಗಳನ್ನೂ ಅವರು ನೆಚ್ಚಿಕೊಂಡಿದ್ದಾರೆ.
ಬಿಜೆಪಿಗೆ ವೈಯುಕ್ತಿಕ ವರ್ಚಸ್ಸು: ಬಿಜೆಪಿ ಅಭ್ಯರ್ಥಿ ಕೆ. ಶಿವಕುಮಾರ್ ಅವರಿಗೆ ಪಕ್ಷದ ಜತೆಗೆ ವೈಯುಕ್ತಿಕ ವರ್ಚಸ್ಸು ಮುಖ್ಯವಾಗಿದೆ. ಬಿಬಿಎಂಪಿ ಕಾರ್ಪೋರೆಟರ್ ಆಗಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪೈಪೋಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕೆ. ವಾಸುದೇವಮೂರ್ತಿ ಇವರು ಸಹೋದರರಾಗಿದ್ದಾರೆ. ಬಲಜ ಸಮುದಾಯಕ್ಕೆ ಸೇರಿರುವ ಕೆ. ಶಿವಕುಮಾರ್, ಬಿಜೆಪಿಯ ಸಾಂಪ್ರದಾಯಿಕ ಮತಗಳ ಜೊತೆಗೆ ಒಬಿಸಿ ಮತಗಳನ್ನು ನೆಚ್ಚಿಕೊಂಡಿದದಾರೆ. ಕ್ಷೇತ್ರದಲ್ಲಿ 8 ಸಾವಿರ ಲಿಂಗಾಯತ ಮತದಾರರಿದ್ದು, ಈ ಮತಗಳು ತಮಗೆ ಸಿಗಲಿವೆ ಎಂಬ ವಿಶಾಸ್ವ ಶಿವಕುಮಾರ್ ಅವರಿಗಿದೆ.
“ಸತತ ಮೂರು ಅವಧಿಗೆ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ನನ್ನನ್ನು ಈ ಬಾರಿಯೂ ಶಾಸಕನಾಗಿ ಮಾಡಲಿವೆ. ಕ್ಷೇತ್ರದ ಅಭಿವೃದ್ಧಿ ಜತೆಗೆ ಇಲ್ಲಿನ ಶಾಂತಿ-ಸಹಬಾಳ್ವೆ ನನ್ನ ಆದ್ಯತೆ. ಬಿಜೆಪಿ ಅಭ್ಯರ್ಥಿಯೇ ನನಗೆ ಪ್ರತಿಸ್ಪರ್ಧಿ’.
– ಎನ್. ಹ್ಯಾರಿಸ್, ಕಾಂಗ್ರೆಸ್
ಕ್ಷೇತ್ರ ಏನೆಂದು ನನಗೆ ಚೆನ್ನಾಗಿ ಗೊತ್ತು. 10 ವರ್ಷ ಕಾಪೋರೇಟರ್ ಆಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದ ಜನ ಈ ಬಾರಿ ಬದ ಲಾವಣೆ ಬಯಸಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಬಿಜೆಪಿಯ ಅಭಿವೃದ್ಧಿ ಪರ ಚಿಂತನೆಗಳನ್ನು ಗಮನಿಸಿ ಮತದಾರರು ನನ್ನ ಕೈ ಹಿಡಿಯಲಿದ್ದಾರೆ.
– ಕೆ. ಶಿವಕುಮಾರ್, ಬಿಜೆಪಿ
-ರಫೀಕ್ ಅಹ್ಮದ್