Advertisement
35 ವರ್ಷಗಳ ಹಿಂದೆ ಕೊರಟಗೆರೆ ಪಟ್ಟಣದಲ್ಲಿ ಜೀವನೋಪಯಕ್ಕಾಗಿ ಶಾಂತಕುಮಾರ್ ಮತ್ತು ಶಾರದಮ್ಮ ದಂಪತಿ, ಸಣ್ಣ ಪೆಟ್ಟಿಗೆ ಅಂಗಡಿ ತೆರೆದು ಕಾಫಿ, ಟೀ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದಿನ ಕಳೆದಂತೆ ಜನ ತಿಂಡಿ, ಊಟ ಕೇಳಲಾರಂಭಿಸಿದ್ರು. ಆಗ ಶಾಂತಕುಮಾರ್ ಮನೆಯಲ್ಲೇ ಊಟ, ತಿಂಡಿ ಸಿದ್ಧಪಡಿಸಿಕೊಂಡು ಟೀ ಶಾಪ್‌ನಲ್ಲೇ ತಂದು ಮಾರಾಟ ಮಾಡುತ್ತಿದ್ದರು. ಕಡಿಮೆ ದರ, ಮನೆ ಊಟವಾದ್ದರಿಂದ ಜನರು ಹೆಚ್ಚು ಬರಲಾರಂಭಿಸಿದರು. ಅಲ್ಲದೆ, ಮಗನಿಗೂ ಒಂದು ಉದ್ಯೋಗ ಬೇಕಲ್ಲ ಎಂದು ತಮ್ಮ ಟೀ ಶಾಪ್ ಮುಂದೆಯೇ ಗಣೇಶನ ಹೆಸರಲ್ಲಿ 10 ವರ್ಷಗಳ ಹಿಂದೆ ಹೋಟೆಲ್ ಆರಂಭಿಸಿದ್ದರು. ಇದನ್ನು ಮಗ ಎಸ್.ವಿಜಯ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಈ ಹೋಟೆಲಿಗೆ ಜನ ಶಾಂತಣ್ಣನ ಹೋಟೆಲ್ ಎಂದೇ ಅಡ್ಡ ಹೆಸರು ಇಟ್ಟಿದ್ದಾರೆ. ಹೊಸದಾಗಿ ಹೋಟೆಲ್ ಪ್ರಾರಂಭಿಸಿದ್ರೂ ಶಾಂತ ಕುಮಾರ್ ಟೀ ಶಾಪ್ ಬಿಟ್ಟಿಲ್ಲ. ತನಗೆ ಬದುಕು ಕಟ್ಟಿಕೊಟ್ಟ ಪೆಟ್ಟಿಗೆ ಶಾಪ್‌ನಲ್ಲಿ ಈಗಲೂ ಟೀ, ಕಾಫಿ ಮಾರಾಟ ಮಾಡುತ್ತಿದ್ದಾರೆ.
ತಟ್ಟೆ ಇಡ್ಲಿ, ಚಿತ್ರಾನ್ನ, ರೈಸ್‌ಬಾತ್, ಶೇಂಗಾ ಚಟ್ನಿ, ಸಾಂಬಾರ್ ಈ ಹೋಟೆಲ್‌ನಲ್ಲಿ ಬೆಳಗ್ಗೆ ಸಿಗುವ ಉಪಾಹಾರ. ಒಂದು ಸಿಂಗಲ್ ಇಡ್ಲಿ ತೆಗೆದುಕೊಂಡ್ರೆ 10 ರೂ., ಮಿಕ್ಸ್ ತಿಂಡಿಯಾದ್ರೆ 30 ರೂ., ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾದ್ರೆ ತಿಂಡಿಗೆ ಕೇವಲ 10 ರೂ. ಮುದ್ದೆ ಊಟ ಸ್ಪೇಷಲ್
ಈ ಹೋಟೆಲ್‌ನ ವಿಶೇಷ ಅಂದ್ರೆ ಮುದ್ದೆ ಊಟ. 30 ರೂ. ಕೊಟ್ರೆ ಮುದ್ದೆ ಜತೆ ಅನ್ನ, ಸಾಂಬಾರು, ಮಜ್ಜಿಗೆ(ಮಿತಿ ಇಲ್ಲ), ಹಪ್ಪಳ, ಉಪ್ಪಿನ ಕಾಯಿ ಕೊಡ್ತಾರೆ. ವಿದ್ಯಾರ್ಥಿಗಳಿಗೆ ಕಡಿಮೆ ದರ. ಕಡಿಮೆ ದರದಲ್ಲಿ ಊಟ, ತಿಂಡಿ ಕೊಡುವುದರಿಂದ ನಿಮಗೆ ಲಾಸ್ ಆಗಲ್ವ ಅಂತ ಹೋಟೆಲ್ ಮಾಲಿಕ ವಿಜಯ್ ಅವರನ್ನು ಕೇಳಿದ್ರೆ, ನಾವು ಗ್ಯಾಸ್ ಬಳಸಲ್ಲ, ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತೇವೆ. ಇದರಿಂದ ಖರ್ಚು ಕಡಿಮೆ, ರುಚಿಯೂ ಹೆಚ್ಚಿರುತ್ತದೆ. ಗ್ರಾಹಕರಿಗೂ ಹೆಚ್ಚು ಇಷ್ಟವಾಗುತ್ತಿದೆ. ಪತ್ನಿ ದಿವ್ಯಾಶ್ರೀ ಕೂಡ ಹೋಟೆಲ್‌ನಲ್ಲಿ ಕೆಲಸ ಮಾಡಿ ಸಾಥ್ ನೀಡುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಖರ್ಚಲ್ಲಿ ರುಚಿಯಾಗಿ ಊಟ ಕೊಡಬೇಕೆಂಬುದು ತಂದೆ ಆಸೆ. ಲಾಭ ಕಡಿಮೆಯಾದ್ರೂ ಹಿಂದಿನ ರುಚಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಬೆಲೆಯ ವಿಷಯದಲ್ಲಿ ಗ್ರಾಹಕರ ಮೇಲೆ ಒತ್ತಡ ಹಾಕುವುದಿಲ್ಲ ಅನ್ನುತ್ತಾರೆ.
Related Articles
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 100 ಮೀಟರ್ ದೂರದ, ಸರ್ಕಾರಿ ಆಸ್ಪತ್ರೆ ಎದುರು. ಕೊರಟಗೆರೆ ಪಟ್ಟಣ. ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆಯವರೆಗೆ. ಹಬ್ಬಗಳಲ್ಲಿ ಮಾತ್ರ ರಜೆ.
Advertisement
ವಿದ್ಯಾರ್ಥಿಗಳಿಗೆ ರಿಯಾಯ್ತಿ ಮಕ್ಕಳು ಚೆನ್ನಾಗಿ ಓದಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಬೆಳಗ್ಗೆ ಟ್ಯೂಶನ್‌ಗೆ, ಶಾಲಾ ಕಾಲೇಜಿಗೆ ಹಳ್ಳಿಯಿಂದ ಬರುವ ಮಕ್ಕಳಿಗೆ 10 ರೂ.ಗೆ ತಿಂಡಿ ಕೊಡುತ್ತೇವೆ ಎನ್ನುತ್ತಾರೆ ವಿಜಯ್.
•ಭೋಗೇಶ ಆರ್. ಮೇಲುಕುಂಟೆ