Advertisement
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ವಟು ನಾಗೇಂದ್ರ ಅವರಿಗೆ ಪಟ್ಟಾಭೀಷೇಕ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
Related Articles
Advertisement
ಕಾರ್ಯಕ್ರಮದಲ್ಲಿ ಶಾಸಕ ನರೇಂದ್ರ ಮಾತನಾಡಿ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳ ಆರೋಗ್ಯ ಕ್ಷೀಣಿಸಿದ್ದ ಹಿನ್ನೆಲೆ ಮಠದ ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮಂಕು ಕವಿದಂತಾಗಿತ್ತು. ಇದೀಗ ಉತ್ತರಾಧಿಕಾರಿ ಆಯ್ಕೆಯಾಗಿರುವುದರಿಂದ ಆ ಮಂಕು ಸರಿದಂತಾಗಿದೆ. ಮುಂದಿನ ದಿನಗಳಲ್ಲಿ ಮಠದ ಶೈಕ್ಷಣಿಕ ಸಂಸ್ಥೆ ವತಿಯಿಂದ ಮಹದೇಶ್ವರ ಬೆಟ್ಟ ಸುತ್ತಮುತ್ತಲ 26 ಹಳ್ಳಿಗಳ ಮಕ್ಕಳಿಗೆ ಉತ್ತಮ ವಿದ್ಯಾದಾನ ನೀಡಬೇಕು. ಈ ಮೂಲಕ ಮಠವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಿದ್ಧಗಂಗಾ ಕ್ಷೇತ್ರದ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಗುಂಡ್ಲುಪೇಡೆ ಶಾಸಕ ನಿರಂಜನ್‍ಕುಮಾರ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪಟ್ಟದ ಗುರುಸ್ವಾಮಿಗಳು, ಉತ್ತರಾಧಿಕಾರಿ ಆಯ್ಕೆ ಸಮಿತಿ ಅಧ್ಯಕ್ಷ ಶಾಗ್ಯ ರವಿ, ನಿರ್ದೇಶಕ ತೋಟೇಶ್ ಪದಾಧಿಕಾರಿಗಳು, ವಿವಿಧ ಮಠಗಳ ಮಠಾಧೀಶರು ಮತ್ತು ಭಕ್ತ ಸಮೂಹ ಭಾಗವಹಿಸಿದ್ದರು.
ಪಟ್ಟಾಭಿಷೇಕ ಕಾರ್ಯಕ್ರಮ: ಉತ್ತರಾಧಿಕಾರಿಗೆ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ಶನಿವಾರ ಬೆಳ್ಳಂ ಬೆಳಗ್ಗೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾ ಕೈಂಕರ್ಯಗಳನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಬೆಳಗ್ಗೆಯೇ ಪಂಚಕಳಸ ಪೂಜೆ, ಶ್ರೀಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಶತನಾಮಾವಳಿಗಳು ಜರುಗಿದವು. ಈ ವೇಳೆ ವಟು ನಾಗೇಂದ್ರ ಅವರು ನಾಡಿನ 3 ಮಠಗಳಾದ ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀ ಮತ್ತು ಕನಕಪುರದ ದೇಗುಲ ಮಠದ ಶ್ರೀಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಸಾಂಪ್ರದಾಯಿಕವಾಗಿ ದೀಕ್ಷೆ ನೀಡಿ ಶಾಂತಮಲ್ಲಿಕಾರ್ಜುನಸ್ವಾಮಿ ಎಂದು ನಾಮಕರಣ ಮಾಡಲಾಯಿತು.