Advertisement

ಶಾಂತಾರಾಮರಿಗೆ ಯಕ್ಷದೇಗುಲ ಪ್ರಶಸ್ತಿ 

12:30 AM Feb 15, 2019 | |

ಯಕ್ಷಗಾನ ವಲಯದಲ್ಲಿ ಮರಿ ಆಚಾರ್‌ ಎಂದೇ ಗುರುತಿಸಿಕೊಂಡಿರುವ ಶಾಂತಾರಾಮ ಆಚಾರ್‌ ಅವರ ಕಲಾಕಸುಬು ಅನುಪಮವಾದುದು. ಬೆಂಗಳೂರಿನ ಕೆ. ಮೋಹನ್‌ ನೇತೃತ್ವದ ಯಕ್ಷದೇಗುಲ ಯಕ್ಷಗಾನ ಸಂಸ್ಥೆ ಫೆ. 17 ರಂದು 2019ರ ಯಕ್ಷದೇಗುಲ ಪ್ರಶಸ್ತಿಯನ್ನಿತ್ತು ಮರಿ ಆಚಾರ್‌ ಅವರನ್ನು ಗೌರವಿಸಲಿದೆ. ಮರಿ ಆಚಾರ್‌ ಕಲಾ ಕೌಶಲವನ್ನು ಗುರುತಿಸಿ ಸುಬ್ಬಣ್ಣ ಭಟ್ಟರು ತಮ್ಮ ಸಾಲಿಕೇರಿ ಯಕ್ಷಗಾನ ಸಂಘ ಅವಕಾಶ ಕೊಟ್ಟು ಒಬ್ಬ ಸಮರ್ಥ ಪ್ರಸಾಧನ ಕಲಾವಿದನಾಗಿ ಬೆಳೆಯಲು ಪ್ರೋತ್ಸಾಹ ನೀಡಿದರು. ಪುರುಷ ವೇಷ, ಸ್ತ್ರೀವೇಷ‚ಗಳೆರಡರ ಮುಖವರ್ಣಿಕೆ ಮತ್ತು ವೇಷಭೂಷಣಗಳಲ್ಲಿ ಸೈ ಎನಿಸಿಕೊಂಡ ಮರಿ ಆಚಾರ್‌ ಬಣ್ಣದ ವೇಷದ ಚುಟ್ಟಿ ಇಡುವುದರಲ್ಲಿಯೂ ನಿಪುಣರು. ಕೈಗೆ ಸಿಕ್ಕ ಯಾವುದೇ ವಸ್ತುವ‌ನ್ನು ಯಕ್ಷ ವೇಷಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸುವ ಕಲಾವಿದ ಅವರು. ದೇಹ ಪಾತ್ರಗಳಿಗನುಗುಣವಾಗಿ ಅಟ್ಟೆ ಮುಂಡಾಸು-ಕೇದಗೆ ಮುಂದಲೆಯನ್ನು ಕಟ್ಟಿ, ಜರಿಗೋಟು ಸುತ್ತಿ, ಕೇದಗೆ ತಾವರೆ ತುರಾಯಿಗಳನ್ನು ಒಪ್ಪವಾಗಿ ಕಟ್ಟುವ ಮರಿ ಆಚಾರ್‌ ಚೌಕಿಯಲ್ಲಿ ಸದಾ ಕ್ರಿಯಾಶೀಲರು. ವೀರಭದ್ರ, ಘೋರರೂಪಿ, ನರಸಿಂಹ ಮೊದಲಾದ ಬಣ್ಣದ ವೇಷಗಳಿಗೆ ಹೊಸ ಕಲ್ಪನೆಯನ್ನು ಮೂಡಿಸಿದವರು. ಕಿರಾತನ ಕೋರೆ ಮುಂಡಾಸು, ಜೋಡಿ ಕೋರೆ ಮುಂಡಾಸು, ಕೆಂಪು ಕಪ್ಪು ಮುಂಡಾಸು, ಕಟ್ಟೋಣದಲ್ಲಿ ನಿಪುಣರು. ಯಕ್ಷಗಾನ ಮಾತ್ರವಲ್ಲದೇ ನಾಟಕ, ಭರತನೃತ್ಯ ಪ್ರಸಾಧನದಲ್ಲೂ ಕುಶಲಿಗರು.

Advertisement
Advertisement

Udayavani is now on Telegram. Click here to join our channel and stay updated with the latest news.

Next