Advertisement

ಶೀಘ್ರ ಕಬ್ಬು ದರ ನಿಗದಿಗೆ ಕುರುಬೂರು ಶಾಂತಕುಮಾರ್‌ ಒತ್ತಾಯ

12:05 PM Sep 20, 2017 | |

ಮೈಸೂರು: ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ನಿಗದಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ ಈ ಬಗ್ಗೆ ಸೂಕ್ತ  ಕ್ರಮವಹಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯ ಕಬ್ಬ ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದರು.

Advertisement

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಆರಂಭಿಸಿದ್ದರೂ ರಾಜ್ಯ ಸರ್ಕಾರ ಕಬ್ಬದರ ನಿಗದಿಗೆ ಮೀನಮೇಷ ಎಣಿಸುತ್ತಿದ್ದು, ಸರ್ಕಾರದ ವಿಳಂಬ ನೀತಿಯಿಂದ ರಾಜ್ಯದ ರೈತರನ್ನು ಕಗ್ಗತ್ತಲಿನಲ್ಲಿ ಇರಿಸಿದಂತಾಗಿದೆ. ರೈತರಿಗೆ ಮಾತ್ರ ಕಬ್ಬಿನ ಹಣ ಬಂದಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಶೇ.9.5ರ ಇಳುವರಿಗೆ ಪ್ರತಿಟನ್‌ ಕಬ್ಬಿಗೆ 3 ಸಾವಿರ ರೂ. ಕನಿಷ್ಠ ದರವನ್ನು ನಿಗದಿ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದ್ದು, ಈ ಬಗ್ಗೆ ಸಕ್ಕರೆ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತರಿಗೆ ನ್ಯಾಯ ಒದಗಿಸಿ: ರಾಜ್ಯದಲ್ಲಿ ಕಳೆದ ವರ್ಷದ ಎಸ್‌ಎಪಿ ದರವನ್ನು ಇನ್ನೂ ನಿಗದಿ ಮಾಡದಿರುವುದರಿಂದ ಅಂದಾಜು 600 ಕೋಟಿ ರೂ. ಹಣ ಈವರೆಗೂ ಪಾವತಿಯಾಗದೆ ಬಾಕಿ ಉಳಿದಿದೆ. ಆದರೆ ರಾಜ್ಯದಲ್ಲಿ ಬೆಳಗಾವಿಯ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಮಾತ್ರ ಕಳೆದ ಸಾಲಿನ ಅಂತಿಮ ಕಂತಿನ ಹಣವನ್ನು ರೈತರಿಗೆ ಪಾವತಿಸುವ ಮೂಲಕ ರೈತರಿಗೆ ಸಹಕಾರಿಯಾಗಿದೆ ಎಂದರು.

ರಾಜ್ಯದಲ್ಲಿ ಎಸ್‌ಎಪಿ ಕಾಯ್ದೆ ಜಾರಿಯಾಗಿ 2 ವರ್ಷ ಕಳೆದರೂ, ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸಿ ರೈತರನ್ನು ವಂಚಿಸಲಾಗುತ್ತಿದ್ದು, ಇದರಿಂದ ರೈತರಿಗೆ ಪ್ರತಿ ಟನ್‌ಗೆ 260 ರೂ. ನಷ್ಟವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ನಿಗಾವಹಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳ ವಿರುದ್ಧ ಕಿಡಿ: ರೈತರ ಸಮಸ್ಯೆಗಳು ಹಾಗೂ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಪಲರಾಗಿದ್ದು, ನೀರಾವರಿ ಸಲಹಾ ಸಮಿತಿ ಸಬೆಯನ್ನು ಸೂಕ್ತ ಸಂದ¸‌ìದಲ್ಲಿ ಕರೆಯದೆ ಅಧಿಕಾರಿಗಳು ನಿರ್ಲಕ್ಷ್ಯತೆ ತೋರುತ್ತಿದ್ದಾರೆ. ಪರಿಣಾಮ ರಾಜ್ಯದ ಜಲಾಶಯಗಳು ಭರ್ತಿಯಾಗಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Advertisement

ಅಚ್ಚಕಟ್ಟು ಪ್ರದೇಶಗಳಿಂದ ರೈತರ ಬೆಳೆಗಳಿಗೆ ಯಾವ ರೀತಿ ನೀರು ಬಿಡಬೇಕೆಂಬ ಸ್ಪಷ್ಟತೆ ಇಲ್ಲದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಆದರೂ ಉಸ್ತುವಾರಿ ಸಚಿವರು ದಸರಾ ಆಚರಣೆಗೆ ನೀಡುವ ಆದ್ಯತೆಯನ್ನು ನೀರಿನ ವಿಷಯದಲ್ಲಿ ನೀಡುತ್ತಿಲ್ಲ ಎಂದು ವಿಷಾದಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಮುಖಂಡರಾದ ಬರಡನಪುರ ನಾಗರಾಜ್‌, ಕೃಷ್ಣೇಗೌಡ ಇನ್ನಿತರರು ಹಾಜರಿದ್ದರು.

ಸೆ.23ರಂದು ವಿಚಾರಗೋಷ್ಠಿ: ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಮುಂದಿನ ಕಾರ್ಯತಂತ್ರ ರೂಪಿಸಲು ಸೆ.23ರಂದು ರಾಜ್ಯಮಟ್ಟದ ವಿಚಾರಗೋಷ್ಠಿ ನಡೆಸಲಾಗುತ್ತಿದೆ. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಚೇತನ್‌ ಗಾರ್ಡನ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ರೈತರ ಸಮಸ್ಯೆ, ಬೇಡಿಕೆಗಳ ಈಡೇರಿಕೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next