Advertisement

ಮತ್ತೆ ಶುರುವಾಯ್ತು ಶಂಕರ್‌ನಾಗ್‌ ಚಿತ್ರಮಂದಿರ

11:37 PM Apr 28, 2019 | Lakshmi GovindaRaju |

ಸಿನಿ ಪ್ರೇಮಿಗಳಿಗೆ ಹೀಗೊಂದು ಸಂತಸದ ಸುದ್ದಿ..! ಹಾಗಂತ ಸ್ಟಾರ್‌ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ವಿಷಯವಿಷ್ಟೇ, ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿದ್ದ ಪ್ರತಿಷ್ಠಿತ ಶಂಕರ್‌ನಾಗ್‌ ಚಿತ್ರಮಂದಿರಕ್ಕೆ ಪುನಃ ಚಾಲನೆ ಸಿಕ್ಕಿರುವುದೇ ಈ ಹೊತ್ತಿನ ವಿಶೇಷ. ಹೌದು, ಕಳೆದ ಎರಡು ವರ್ಷಗಳ ಹಿಂದೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದ ಶಂಕರ್‌ನಾಗ್‌ ಚಿತ್ರಮಂದಿರ ಇದೀಗ ಹೊಸ ತಂತ್ರಜ್ಞಾನದೊಂದಿಗೆ, ನವೀಕರಣಗೊಂಡು ಮತ್ತೆ ಚಿತ್ರ ಪ್ರದರ್ಶನ ಆರಂಭಿಸಿದೆ.

Advertisement

ಚಿತ್ರಮಂದಿರಕ್ಕೆ ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ ಎಂದು ಮರುನಾಮಕರಣ ಮಾಡಲಾಗಿದ್ದು, ಈ ಮೂಲಕ ಶಂಕರ್‌ನಾಗ್‌ ಚಿತ್ರಮಂದಿರಕ್ಕೆ ಮರುಜೀವ ಬಂದತಾಗಿದೆ. ಇನ್ನು ಹೊಸ ರೂಪ ಪಡೆದುಕೊಂಡು ಪ್ರದರ್ಶನ ಆರಂಭಿಸಿರುವ ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ ಹಲವು ವಿಶೇಷತೆಗಳಿಂದ ಕೂಡಿದೆ. ಇದೇ ಮೊದಲ ಬಾರಿಗೆ ಪ್ರೊಜೆಕ್ಟರ್‌ ನೆರವಿಲ್ಲದೆ, ಚಿತ್ರ ಪ್ರದರ್ಶಿಸಬಹುದಾದ ಬೃಹತ್‌ ಗಾತ್ರದ 3ಡಿ -ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ.

14 ಮೀ ಅಗಲ, 7.2 ಮೀ ಎತ್ತರ ಹೊಂದಿರುವ ಈ 3ಡಿ – ಎಲ್‌ಇಡಿ ಪರದೆಯನ್ನು ಸ್ಯಾಮ್‌ಸಂಗ್‌ ಕಂಪೆನಿ ತಯಾರಿಸಿದೆ. ಚಿತ್ರ ಪ್ರದರ್ಶನಕ್ಕೆ ಅನುಗುಣವಾಗಿ ಐದು, ಹತ್ತು ಮತ್ತು ಹದಿನಾಲ್ಕು ಮೀ. ಹೀಗೆ ಮೂರು ಗಾತ್ರಗಳಲ್ಲಿ ಎಲ್‌ಇಡಿ ಪರದೆಯನ್ನು ವಿಸ್ತರಿಸಬಹುದಾಗಿದೆ. ಜೆಬಿಎಲ್‌ ಹೆಡ್‌ ಫೋನ್‌ ಮತ್ತು ಸ್ಪೀಕರ್‌ ಮೂಲಕ ಚಿರಪರಿಚಿತವಾಗಿರುವ ಹರ್ಮನ್‌ ಸಂಸ್ಥೆ ಥಿಯೇಟರ್‌ನ ಸೌಂಡ್‌ ಸಿಸ್ಟಂ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ.

ಸ್ಕಲ್ಪಟೆಡ್‌ ಸೌಂಡ್‌ ಟೆಕ್ನಾಲಜಿ ಸಿಸ್ಟಂನಿಂದಾಗಿ ಥಿಯೇಟರ್‌ನ ಪ್ರತಿ ಮೂಲೆಗೂ ಸಮಾನ ಮತ್ತು ಸ್ಪಷ್ಟ ಧ್ವನಿ ಬಿತ್ತರವಾಗಲಿದೆ. ಹೆಚ್‌ಡಿಆರ್‌ ತಂತ್ರಜ್ಞಾನದಿಂದಾಗಿ ಸಾಮಾನ್ಯ ಥಿಯೇಟರ್‌ಗಳಿಗಿಂತ ಸುಮಾರು ನಾಲ್ಕು ಪಟ್ಟು ಉತ್ಕೃಷ್ಟ, ಅತ್ಯುತ್ತಮ ದೃಶ್ಯ ಸ್ಪಷ್ಟತೆ ಇಲ್ಲಿ ಕಾಣಬಹುದು. ಏಕಕಾಲಕ್ಕೆ ಸುಮಾರು 650 ಜನರು ಕುಳಿತು ವೀಕ್ಷಿಸಬಹುದಾದ ಸಾಮರ್ಥ್ಯವಿರುವ ಈ ಥಿಯೇಟರ್‌ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಫ‌ುಡ್‌ ಕೋರ್ಟ್‌, ಆಧುನಿಕ ಮಾದರಿಯ ಶೌಚಾಲಯ, ಗೆಸ್ಟ್‌ ಲಾಂಚ್‌ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಇನ್ನು ಕನ್ನಡ, ಹಿಂದಿ, ತಮಿಳು, ತೆಲುಗು, ಇಂಗ್ಲೀಷ್‌ ಹೀಗೆ ಬಹುಭಾಷಾ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿದ್ದು, ಪ್ರತಿ ಟಿಕೆಟ್‌ ಬೆಲೆ 250 ರಿಂದ 500 ರೂಗಳ ವರೆಗೆ ಇರುತ್ತದೆ. ಪ್ರೇಕ್ಷಕರು ಆನ್‌ಲೈನ್‌ ಮೂಲಕವೂ ಟಿಕೆಟ್‌ ಬುಕ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ತಮಗೆ ಬೇಕಾದ ಸೀಟನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು.

Advertisement

ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌, ಸ್ಯಾಮ್‌ಸಂಗ್‌ ಇಂಡಿಯಾದ ಉಪಾಧ್ಯಕ್ಷ ಪುನೀತ್‌ ಸೇಠಿ, ಹರ್ಮನ್‌ ಸಂಸ್ಥೆಯ ಭಾರತೀಯ ವ್ಯವಹಾರಗಳ ಮುಖ್ಯಸ್ಥ ಪ್ರಶಾಂತ್‌ ಗೋವಿಂದನ್‌, ಸ್ವಾಗತ್‌ ಗ್ರೂಪ್‌ ಆಫ್ ಸಿನಿಮಾಸ್‌ನ ನಿರ್ದೇಶಕ ಕಿಶೋರ್‌. ಪಿ ಮೊದಲಾದವರು ಹಾಜರಿದ್ದು, ನವೀಕರಣಗೊಂಡಿರುವ ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ಗೆ ಚಾಲನೆ ನೀಡಿದ್ದಾರೆ.

ಇನ್ನು ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ ಮರು ನವೀಕರಣಗೊಂಡು ಪ್ರದರ್ಶನಗೊಳ್ಳುತ್ತಿರುವುದರ ಬಗ್ಗೆ ಮಾತನಾಡುವ ಸ್ವಾಗತ್‌ ಗ್ರೂಪ್‌ ಆಫ್ ಸಿನಿಮಾಸ್‌ನ ನಿರ್ದೇಶಕ ಕಿಶೋರ್‌. ಪಿ, ಮಲೇಷಿಯಾ ಮತ್ತು ಚೀನಾ ದೇಶಗಳನ್ನು ಹೊರತುಪಡಿಸಿದರೆ, ಸದ್ಯ ಅತಿದೊಡ್ಡ 3ಡಿ – ಎಲ್‌ಇಡಿ ಪರದೆ ಇರುವುದು ನಮ್ಮ ಬೆಂಗಳೂರಿನ ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ನಲ್ಲಿ.

ಇದು ನಮಗೊಂದು ಹೆಮ್ಮೆಯ ವಿಷಯ. ಮಲ್ಟಿಫ್ಲೆಕ್ಸ್‌ಗಳಲ್ಲಿ ದೊರೆಯುವುದಕ್ಕಿಂತ ಆಧುನಿಕ ಸೌಲಭ್ಯಗಳು ಈ ಥಿಯೇಟರ್‌ನಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೇ ವೇಳೆ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಆಡಿಯನ್ಸ್‌ಗೆ ಹತ್ತಿರವಾಗಲು, ಹೊಸ ರೂಪದೊಂದಿಗೆ ಚಾಲನೆ ನೀಡಿದ್ದೇವೆ ಎನ್ನುತ್ತಾರೆ.

ಹಳೆ ನೆನಪುಗಳು ರಿಫ್ರೆಶ್‌: ಶಂಕರ್‌ನಾಗ್‌ ಸ್ವಾಗತ್‌ ಓನಿಕ್ಸ್‌ ಥಿಯೇಟರ್‌ ಹೊಸ ಹೆಸರಿನಲ್ಲಿ ಚಿತ್ರ ಪ್ರದರ್ಶನ ಆರಂಭಿಸಿರುವುದಕ್ಕೆ ಚಿತ್ರರಂಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಟ ಸುದೀಪ್‌, ಶಂಕರ್‌ನಾಗ್‌ ಥಿಯೇಟರ್‌ ಜೊತೆಗೆ ಹಲವು ಸಿಹಿ ನೆನಪುಗಳಿವೆ. ಹೊಸ ರೂಪದಲ್ಲಿ ಮತ್ತೆ ಚಿತ್ರ ಪ್ರದರ್ಶನವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹಳೆಯ ನೆನಪುಗಳು ಮತ್ತೂಮ್ಮೆ ರಿಫ್ರೆಶ್‌ ಆದಂತಾಗಿದೆ ಎಂದಿದ್ದಾರೆ.

ಚಿತ್ರರಂಗದ ಜೊತೆಗೆ ಹಲವು ವರ್ಷಗಳ ನಂಟು ಹೊಂದಿರುವ, ಶಂಕರ್‌ನಾಗ್‌ ಚಿತ್ರಮಂದಿರ ಮತ್ತೆ ಸುಸಜ್ಜಿತ, ಅಧುನಿಕ ತಂತ್ರಜ್ಞಾನದಲ್ಲಿ ಮರುನವೀಕರಣಗೊಂಡು ಪ್ರದರ್ಶನಕ್ಕೆ ಅಣಿಯಾಗಿರುವುದು ನಿಜಕ್ಕೂ ಖುಷಿಯ ವಿಷಯ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಮುಚ್ಚುವ ಹೊತ್ತಲ್ಲಿ, ಮತ್ತೆ ಆಧುನಿಕರಣಗೊಂಡು ಚಿತ್ರಪ್ರದರ್ಶನಕ್ಕೆ ಸಜ್ಜಾಗಿರುವುದಕ್ಕೆ ವಾಣಿಜ್ಯ ಮಂಡಳಿ ಪರವಾಗಿ ಅಭಿನಂದಿಸುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌. ಎ ಚಿನ್ನೇಗೌಡ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next