ಶಿರ್ವ: ಬೇಡಿಕೆ ಕುದುರಿದ್ದರಿಂದಾಗಿ ಶಂಕರಪುರ ಮಲ್ಲಿಗೆ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ರವಿವಾರ ಅಟ್ಟೆಗೆ ಕಟ್ಟೆಯಲ್ಲಿ ಗರಿಷ್ಠ ದರ 1,250 ರೂ. ತಲುಪಿದೆ. ಸಾಲುಸಾಲು ಶುಭ ಸಮಾರಂಭಗಳು, ಧನು ಸಂಕ್ರಮಣ ಬೇಡಿಕೆ ಹೆಚ್ಚಲು ಕಾರಣಗಳಾಗಿವೆ.
ಕಳೆದ ತಿಂಗಳು ಶಂಕರಪುರ ಮಲ್ಲಿಗೆ ದರ ನಿಗದಿ ಕೇಂದ್ರದಿಂದ ದರ ಪರಿಷ್ಕರಣೆ ನಡೆದು ಅಭಾವ ಸಂದರ್ಭದಲ್ಲಿ ಅಟ್ಟೆಗೆ ಗರಿಷ್ಠ ದರ 1,250 ರೂ. ದರ ನಿಗದಿಯಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ರವಿವಾರ 1,250 ರೂ. ತಲುಪಿ ಮೈಲಿಗಲ್ಲು ನಿರ್ಮಿಸಿದೆ. ಶನಿವಾರ ಅಟ್ಟೆಯ ದರ 850 ರೂ. ಇತ್ತು.
ಚಳಿಗಾಲದ ಸಮಯ ಹಾಗೂ ಗಿಡಗಳಿಗೆ ರೋಗಬಾಧೆಯಿಂದ ಮಲ್ಲಿಗೆ ಗಿಡಗಳು ಹಾಳಾಗುತ್ತಿದ್ದು, ಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿದೆ. ಜಾತ್ರೆ -ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಋತು ಇದಾಗಿದ್ದು, ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆಯಾಗಿದೆ.
ಮಲ್ಲಿಗೆಗೆ ಬೇಡಿಕೆ ಕುದುರಿದ ಸಂದರ್ಭಗಳಲ್ಲಿ ಮಾರುಕಟ್ಟೆಗೆ ಸಾಕಷ್ಟು ಮಲ್ಲಿಗೆ ಬಂದಿದ್ದರೂ ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಅಧಿಕ ದರ ವಸೂಲು ಮಾಡುತ್ತಿದ್ದರು. ಬೇಡಿಕೆಯಿಲ್ಲದೆ ದರ ಕುಸಿಯುವ ಸಂದರ್ಭಗಳಲ್ಲಿ ಅಟ್ಟೆಗೆ 70 ರೂ. ವರೆಗೂ ತಲುಪಿ ಹೂವನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿತ್ತು.
ಮಲ್ಲಿಗೆ ಹೂವಿನ ಬೇಡಿಕೆಗೆ ಅನುಗುಣವಾಗಿ ದರ ನಿಗದಿ ಯಾಗುತ್ತದೆ. ಈಗ ತೀರಾ ಅಭಾವ ಇರುವುದರಿಂದ ಅಟ್ಟೆಗೆ ಗರಿಷ್ಠ 1,250 ರೂ. ತಲುಪಿದೆ.
ಅಣ್ಣಿ ಶೆಟ್ಟಿ ಶಿರ್ವ ಪದವು, ಮಲ್ಲಿಗೆ ವ್ಯಾಪಾರಿ