Advertisement
ಕುಂದಾಪುರ – ಶಿವಮೊಗ್ಗ ಹಾಗೂ ಬೈಂದೂರು – ವಿರಾಜಪೇಟೆ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯೂ ಇದಾಗಿರುವುದರಿಂದ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ. ಹಾಲಾಡಿಯಿಂದ ತೀರ್ಥಹಳ್ಳಿ, ಶಿವಮೊಗ್ಗ ಕಡೆಗೆ ತೆರಳಬೇಕಾದರೂ ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ ಮೂಲಕ ಇದೇ ಮಾರ್ಗವಾಗಿ ಹತ್ತಿರವಾಗುತ್ತದೆ. ಸಿದ್ದಾಪುರದಿಂದ ಶಂಕರನಾರಾಯಣಕ್ಕೆ ಸುಮಾರು 8 ಕಿ.ಮೀ. ಅಂತರವಿದ್ದು, ಈ ಪೈಕಿ ಸಿದ್ದಾಪುರದಿಂದ ಆರಂಭವಾಗಿ ಸುಮಾರು 2 ಕಿ.ಮೀ. ದೂರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಈಗ ಮಳೆಯಿಂದಾಗಿ ಆಗುಂಬೆ, ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಗೋಳಿಯಂಗಡಿ, ಹಾಲಾಡಿ, ಉಡುಪಿ ಕಡೆಯಿಂದ ಶಿವಮೊಗ್ಗ, ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಹೊಸಂಗಡಿ ಮೂಲಕವಾಗಿ ಇದೇ ಮಾರ್ಗವಾಗಿ ತೆರಳುತ್ತಿದೆ. ಈಗ ಈ ಮಾರ್ಗದಲ್ಲಿ ವಾಹನಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಹೊಂಡ – ಗುಂಡಿಗಳ ಈ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ನಿತ್ಯ ವಾಹನ ಸವಾರರಂತೂ ಕಷ್ಟಪಟ್ಟು ಸಂಚರಿಸುತ್ತಿದ್ದಾರೆ.
ಶಂಕರನಾರಾಯಣ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಜನರು ನಿತ್ಯ ಇದೇ ಮಾರ್ಗವಾಗಿ ಸಂಚರಿಸಬೇಕಿದೆ. ಮಳೆ ಸಂದರ್ಭ ರಸ್ತೆಯಲ್ಲಿಯೇ ನೀರು ನಿಂತು ವಾಹನ ಸವಾರರಿಗೆ ಕೆಸರ ಸಿಂಚನವಾಗುತ್ತಿದೆ. ತೇಪೆಯೂ ಇಲ್ಲ
ಹೊಂಡ-ಗುಂಡಿಗಳ ರಸ್ತೆಯನ್ನು ಈ ಬಾರಿ ಮಳೆಗಾಲಕ್ಕೂ ಮುನ್ನ ಕನಿಷ್ಠ ದುರಸ್ತಿ ನಡೆಸುವ ಪ್ರಯತ್ನವೂ ನಡೆದಿಲ್ಲ. ಪ್ರತಿ ವರ್ಷವೂ ತೇಪೆ ಹಾಕಲಾಗುತ್ತಿತ್ತು. ಈ ಬಾರಿ ಅದನ್ನು ಕೂಡ ಮಾಡಿಲ್ಲ. ಇದರಿಂದ ರಸ್ತೆಯ ಅನೇಕ ಕಡೆಗಳಲ್ಲಿ ದೊಡ್ಡ – ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಅದರಲ್ಲೂ ಬೈಕ್ ಸವಾರರಂತೂ ಹರಸಾಹಸ ಪಟ್ಟು ವಾಹನ ಚಲಾಯಿಸುತ್ತಿದ್ದಾರೆ.
Related Articles
ಸಿದ್ದಾಪುರ – ಶಂಕರನಾರಾಯಣ ರಸ್ತೆಯ ಹೊಂಡ – ಗುಂಡಿಗಳಿರುವ ಕಡೆಯಲ್ಲಿ ಶೀಘ್ರ ಲೋಕೋಪಯೋಗಿ ಇಲಾಖೆಯ ಅನುದಾನದಿಂದ ತೇಪೆ ಹಾಕಲಾಗುವುದು. ಈ ರಸ್ತೆ ಸೇರಿದಂತೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಲ್ಲ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯಿಂದ ಸುಮಾರು 43 ಕೋ.ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಳೆ ಕಡಿಮೆ ಆದ ಅನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
-ದುರ್ಗಾದಾಸ್, ಸಹಾಯಕ ಕಾರ್ಯನಿರ್ವಾಹಕ
ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಕುಂದಾಪುರ
Advertisement