Advertisement
ವಿಧಾನ ಪರಿಷತ್ತಿನ ಪ್ರಸ್ತುತ ಘನವೆತ್ತ ಸಭಾಪತಿ ಶಂಕರಮೂರ್ತಿ ಯವರು ನನ್ನ ತಿಳಿವಳಿಕೆಯ ಮಟ್ಟಿಗೆ ರಾಜಕಾರಣದಲ್ಲಿ ನೈಜ ಪ್ರಾಮಾಣಿಕತೆಯ ಹೆಸರಿನಲ್ಲಿ ಉಳಿದುಕೊಂಡಿರುವ ಅಪರೂಪದ ಕೊನೆಯ ಕೊಂಡಿಗಳಲ್ಲೊಬ್ಬರು. ಈ ಹಿಂದೆ ಕರ್ನಾಟಕದ ಕೇಸರಿಯೆಂದೇ ಪ್ರಖ್ಯಾತರಾದ ಮೊನಚು ಮಾತಿನ ಹಿರಿಯ ಧುರೀಣ ದಿವಂಗತ ಜಗನ್ನಾಥ ರಾವ್ ಜೋಷಿಯವರು ಕರ್ನಾಟಕದ ಆಯ್ದ ಶಾಸಕರ ಸಭೆಯೊಂದರಲ್ಲಿ ಮಾತನಾಡುತ್ತಾ “”ಎಲಾ ಮಕ್ಕಳಾ, ನಿಮಗಿಂತ ವಿದ್ಯಾವಂತರು, ನಿಮಗಿಂತ ಬುದ್ಧಿವಂತರು, ನಿಮಗಿಂತ ಸಮರ್ಥರು ಮತ್ತು ರಾಷ್ಟ್ರ ಪ್ರೇಮಿಗಳು ವಿಧಾನಸೌಧದ ಹೊರಗೆ ಕೋಟ್ಯಂತರ ಜನರಿದ್ದಾರೆ. ಆದರೆ ನಿಮ್ಮ ಹಣೆಬರಹ ಚೆನ್ನಾಗಿರುವುದರಿಂದ ನೀವು ಸದನದ ಒಳಗಿದ್ದೀರಿ” ಎಂದು ಹೇಳಿ ಕೊನೆಗೊಂದು ಮಾತು ಸೇರಿಸಿದ್ದರು. “”ನಿಮ್ಮನ್ನು ಆರಿಸಿ ಕಳುಹಿಸಿದ ಕೋಟ್ಯಂತರ ಮಂದಿ ನಿಮಗಿಂತ ಯೋಗ್ಯರು, ಸದನದಲ್ಲಿ ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದಾರೆಂದು ತಿಳಿದು ವರ್ತಿಸಿದರೆ ನಿಮ್ಮ ಘನತೆ ಹೆಚ್ಚುತ್ತೆ. ಅದಲ್ಲವಾದರೆ…!” ಜಗನ್ನಾಥ್ ರಾವ್ ಮಾತು ಮುಗಿಸಿದ್ದರು. ಅಂದಿನ ಜೋಷಿಯವರ ಮಾತುಗಳನ್ನು ಶಂಕರ ಮೂರ್ತಿ ಕೇಳಿಸಿಕೊಂಡಿದ್ದಾರೋ ಇಲ್ಲವೋ ಬೇರೆ ಮಾತು. ಆದರೆ ಒಂದಂತೂ ಸತ್ಯ, ಸರಿಸುಮಾರು 30 ವರ್ಷಗಳ ಕಾಲ ನಿರಂತರವಾಗಿ 6 ಬಾರಿ ಮೇಲ್ಮನೆಯ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದು ಮಾತ್ರವಲ್ಲ, 2002ರಲ್ಲಿ ವಿರೋಧ ಪಕ್ಷದ ನಾಯಕನಾಗಿ ನಂತರ ಸಮ್ಮಿಶ್ರ ಸರಕಾರ ಬಂದೊಡನೆ ಮಂತ್ರಿಯಾಗಿ ಕೆಲಸ ಮಾಡಿದ ಶಂಕರಮೂರ್ತಿ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಹೊಂದಿಲ್ಲವೆಂಬುದೇ ಇಂದಿನ ರಾಜಕಾರಣದಲ್ಲೊಂದು ಅದ್ಭುತ. ಸಾಮಾನ್ಯ ಯುವ ಪ್ರಜೆಯೊಬ್ಬ ರಾಜಕಾರಣದ ಕಾರ್ಯಕರ್ತನಾಗಿ, ಕಾರ್ಯಕರ್ತನೊಬ್ಬ ಜನಸಂಘಟಕನಾಗಿ, ಜನಸಂಘಟಕ ರಾಜಕೀಯ ಪಕ್ಷದ ನೇತಾರನಾಗಿ, ನೇತಾರ ಶಾಸಕನಾಗಿ, ಶಾಸಕ ವಿರೋಧ ಪಕ್ಷದ ನಾಯಕನಾಗಿ, ವಿಪಕ್ಷದ ಮುಖಂಡ ಸಮ್ಮಿಶ್ರ ಸರಕಾರದ ಸಭಾ ನಾಯಕನಾಗಿ, ಸಭಾನಾಯಕನೇ ಸದನದ ಸಭಾಪತಿಯಾಗಿ ಸುಮಾರು 8 ವರ್ಷಗಳ ಕಾಲ ಶಂಕರಮೂರ್ತಿ ಅಧಿಕಾರ ನಿರ್ವಹಿಸಿದ್ದು ಒಂದು ದಾಖಲೆಯಾದರೆ, ಸಭಾಪತಿ ಹುದ್ದೆಯ ಮೂಲಕ ಸದನದ ಗೌರವ ಹೆಚ್ಚಿಸಿದ್ದು ಇನ್ನೊಂದು ಹೆಗ್ಗಳಿಕೆ. ರಾಜಕಾರಣವೇನೇ ಇರಲಿ ಜನಪರ ಹೋರಾಟದ ಮೂಲಕವೇ ಮೇಲೆದ್ದು ಬಂದ ಕಾಗೋಡು ತಿಮ್ಮಪ್ಪನವರು ಕಿರಿಯರಾದ ನಮಗೆಲ್ಲಾ ಹೇಳಿದ ಬುದ್ಧಿ ಮಾತು.. “”ನಿಮಗೆಲ್ಲಾ ಅಧಿಕಾರದ ಮೆಟ್ಟಿಲುಗಳೇನೆಂದು ಗೊತ್ತೇ ಹೊರತು ಹೋರಾಟದ ಪೆಟ್ಟೇನೆಂದು ಗೊತ್ತಿಲ್ಲ. ನಿತ್ಯ ಊಟಕ್ಕೆ ಪರದಾಡುವ ಬಡವರ ಮಧ್ಯೆ ನಿಂತು ಮಾಡಿದ ಹೋರಾಟಗಳು, ಅದರಿಂದ ತಿಂದ ಪೆಟ್ಟು, ದುಡಿದುಣ್ಣುವವರ ಹಕ್ಕಿಗಾಗಿ ಮಾಡಿದ ಚಳುವಳಿಯಿಂದ ಸಿಕ್ಕಿದ ಜೈಲೂಟ, ಇವೆಲ್ಲಾ ರಾಜಕಾರಣಿಗಳನ್ನು ರೂಪಿಸಬೇಕು. ಆದರಿಂದು ರಾಜಕಾರಣ, ಅಧಿಕಾರ, ಮಂತ್ರಿಗಿರಿಗಳೆಲ್ಲಾ ಹಣದ ಮೂಟೆಯ ಮೂಲಕ ತೀರ್ಮಾನವಾಗುತ್ತದೆ” ಎಂದು ಕಟುಕಿ ಆಡಿದ್ದರು ಕಾಗೋಡು.
Related Articles
Advertisement
ಕರ್ನಾಟಕ ರಾಜ್ಯದ ಆರುವರೆ ಕೋಟಿ ಮೀರಿದ ಸಾಮಾನ್ಯ ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ರಾಜಧಾನಿಗೋ- ವಿಧಾನಸೌಧಕ್ಕೋ ಬರಲಾಗದು. ಅವರ ಪ್ರತಿನಿಧಿಗಳಾಗಿ ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕಿದೆ. ಜನರ ಧ್ವನಿಯಾಗಿ ಕೆಲಸ ಮಾಡಿಯೆಂದು ಮೊನ್ನೆ ಸ್ಪೀಕರ್ ರಮೇಶ್ ಕುಮಾರ್‌ರವರು ಹೇಳಿದ ಕಿವಿ ಮಾತಿನಂತೆ, ಶಂಕರಮೂರ್ತಿಯವರು ಪ್ರಜಾಪ್ರಭುತ್ವದ ತಿರುಳುಗಳನ್ನು ಮೇಲ್ಮನೆಯ ಶಾಸಕರಿಗೆ ವಿವರಿಸುತ್ತಿದ್ದರು. ಹೊಸದಾಗಿ ಬಂದ ಶಾಸಕರು ಎಡವಿದರೆ ಅವರ ನೆರವಿಗೆ ಬಂದು ಅವಕಾಶ ಕಲ್ಪಿಸುತ್ತಿದ್ದರು. ಒಂದು ಸಾರಿ ಬಜೆಟ್ ಅಧಿವೇಶನದ ಮೇಲೆ ಮಾತನಾಡುತ್ತಿದ್ದ ನಾನು, “”ಸಭಾಪತಿಯವರೆ, ತಿಂಗಳಿಗೆ ಲಕ್ಷ ರೂಪಾಯಿ ಸಂಬಳ ಪಡೆಯುವ ಸರಕಾರಿ ನೌಕರರ ಭಡ್ತಿ ಬಗ್ಗೆ ದಿನಗಟ್ಟಲೆ ಈ ಸದನ ಮಾತನಾಡುತ್ತೆಯಾದರೆ ಸರಕಾರಿ ಶಾಲೆಯಲ್ಲಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ಸಂಬಳ ಪಡೆಯುವ ಬಿಸಿಯೂಟವನ್ನು ಮಾಡುವ ಮಹಿಳೆಯರಿಗೆ ಸಂಬಳ ಸಿಗದೆ ಆರು ತಿಂಗಳಾಯಿತು. ಅವರ ನೆರವಿಗೆ ಬರುವಂತೆ ತಾವು ಆದೇಶ ಮಾಡಬೇಕು” ಎಂದು ಕೋರಿದೆ. ಚರ್ಚೆ ಬೇರೆ ರೂಪ ಪಡೆದು ಆ ದಿನ ಕಲಾಪ ಮುಂದೂಡಲ್ಪಟ್ಟಿತ್ತು. ಮರುದಿನ ಕಲಾಪ ಪ್ರಾರಂಭವಾದಾಗ ಸಭಾಪತಿ ಬಂದು ಆಸೀನರಾಗುತ್ತಲೇ ಕಲಾಪ ಕೈಗೆತ್ತಿಕೊಳ್ಳುತ್ತಾ, “”ನಿನ್ನೆಯ ಕಲಾಪದಲ್ಲಿ ಸರಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ತಿಂಗಳಿಗೆ ಕೊಡುವ ಒಂದೂವರೆ ಸಾವಿರ ರೂಪಾಯಿಯನ್ನು ಕೊಡದೇ ಆರು ತಿಂಗಳಾಯ್ತು ಎಂದು ಪೂಜಾರಿ ಹೇಳಿದ ಮಾತು ರಾತ್ರಿಯಿಡಿ ನನ್ನ ನಿದ್ದೆಗೆ ಧಕ್ಕೆ ತಂತು. ಈ ಬಗ್ಗೆ ತಕ್ಷಣ ಗಮನಹರಿಸಿ” ಎಂದು ಸರಕಾರಕ್ಕೆ ಸೂಚಿಸಿದ್ದನ್ನು ಕೇಳಿ ನಾನು ಕ್ಷಣಕಾಲ ಭಾವುಕನಾದೆ. ಹೀಗೆ ಶಂಕರಮೂರ್ತಿಯವರು ಸಭಾಪತಿಯಾಗಿ ಸವೆಸಿದ ಹಾದಿ, ನಡೆದ ದಾರಿಗಳೆಲ್ಲಾ ಹೂವಿನ ಹಾಸಿಗೆಯಾಗಿಯೂ ಇರಲಿಲ್ಲ. ರಾಜಕೀಯ ಕಾರಣಗಳಿಗಾಗಿ ಅನೇಕ ಅಡೆತಡೆಗಳು ಅವರನ್ನು ಕಾಡಿದ್ದು, ಒಂದು ವರ್ಷದ ಹಿಂದೆಯಷ್ಟೇ ಪೀಠದ ಘನತೆಯನ್ನು ಲೆಕ್ಕಿಸದೆ ಅವರ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. ಗೊತ್ತುವಳಿಯಲ್ಲಿ ಗೆಲುವು ಸಾಧಿಸಿದ ಶಂಕರಮೂರ್ತಿಯವರು “”ನನ್ನ ಬದುಕು ತೆರೆದ ಪುಸ್ತಕ, ಕೆಟ್ಟ ಮನಸ್ಸುಗಳಿಗೆ ಪ್ರತಿಕ್ರಿಯಿಸಲಾರೆ” ಎಂದಿದ್ದರು. ಅಟಲ್‌ಜೀ, ಅಡ್ವಾಣಿ ಸಹಿತ ಸಂಘ ಪರಿವಾರದ ಗರಡಿಯಲ್ಲೇ ಮೇಲೆದ್ದು ಬಂದ ಶಂಕರಮೂರ್ತಿಯವರು ಬದುಕಿನಲ್ಲಿ ಶಿಸ್ತಿನ ಸಿಪಾಯಿ. ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ, ರಾಜಿಯೇ ಇಲ್ಲದಿರುವ ಕಟು ನಿರ್ಧಾರ. ತಾನು ಸಂಘ ಸ್ವಯಂ ಸೇವಕ ಎನ್ನಲು ಅಪರಿಮಿತ ಹೆಮ್ಮೆ.
ಸದನದಲ್ಲಿ ಮೊಳಗಿತು ವಂದೇ ಮಾತರಂ…ಸಭಾಪತಿ ಸ್ಥಾನ ಅಲಂಕರಿಸಿದ ಪ್ರಥಮ ಅಧಿವೇಶನದಲ್ಲೆ ಸದನ ಪ್ರಾರಂಭವಾಗುವ ಮುಂಚೆ ಎಲ್ಲರೂ ಎದ್ದು ನಿಂತು ವಂದೇ ಮಾತರಂಗೆ ದನಿ ಗೂಡಿಸುವ ಸಂಪ್ರದಾಯ ಪ್ರಾರಂಭಿಸಿದ ಮೂರ್ತಿ ಸದನದ ಅಂತಿಮ ದಿನ ಜನಗಣಮನ ಹಾಡಿಸುವುದರ ಮೂಲಕ ರಾಷ್ಟ್ರಗೀತೆಗೆ ಗೌರವ ಕೊಡುತ್ತಿದ್ದರು. ಇದು ಅವರೇ ರೂಪಿಸಿದ ನಿಯಮ. ರಾಜ್ಯಸಭೆ ಮತ್ತು ಲೋಕಸಭೆಯಲ್ಲೂ ಅನುಷ್ಠಾನವಾಯಿತು. ಪರಿಷತ್ತಿನ ಸಭಾಂಗಣದಲ್ಲಿ ಸುಭಾಶ್ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಲಾಲ್ ಬಹದ್ದೂರ್ ಶಾಸಿŒ, ಸರ್. ಎಂ ವಿಶ್ವೇಶ್ವರಯ್ಯರವರೊಂದಿಗೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳು ರಾರಾಜಿಸುವಂತೆ ಮಾಡಿದ್ದು, ಅವರ ಆಸಕ್ತಿಯ ಸ್ವರೂಪ. ಒಟ್ಟಾರೆ ಸ್ಥಿತಃಪ್ರಜ್ಞ ರಾಜಕಾರಣಿ ಶಂಕರಮೂರ್ತಿಯವರು ತಮ್ಮ 20ರ ಹರೆಯದ ದಿನಗಳಿಂದ ರಾಷ್ಟ್ರೀಯತೆಯ ಹೋರಾಟದ ಮೂಲಕ ಇದೀಗ 79 ರ ತುಂಬು ವಯಸ್ಸಿನಲ್ಲೂ ರಾಜಧರ್ಮದ ರಾಜಕಾರಣದೊಂದಿಗೆ ಅಧಿಕಾರ ಮುಗಿಸಿ ಮರಳುತ್ತಿದ್ದಾರೆ. ಶಂಕರಮೂರ್ತಿಯಂತಹ ಕುಶಲಮತಿ ಆಡಳಿತಗಾರ ರಾಜ್ಯದ ಮಟ್ಟಿಗೆ ಬಹುಕಾಲ ದುರ್ಲಭ. ಕೆಲ ಸಮಯದ ಹಿಂದೆ ಸಭಾ ನಾಯಕರಾಗಿದ್ದ ಹಿರಿಯ ಸದಸ್ಯ ಎಸ್. ಆರ್. ಪಾಟೀಲ್, “”ಸಭಾಪತಿಯವರೇ.. ದೆಹಲಿಯ ಸುದ್ದಿಗಳ ಪ್ರಕಾರ, ನಿಮ್ಮ ಅಧಿಕಾರದ ಅವಧಿಯು ಮುಗಿಯುತ್ತಲೇ ತಾವು ಯಾವುದಾದರೊಂದು ರಾಜ್ಯಕ್ಕೆ ರಾಜ್ಯಪಾಲರಾಗುವಿರಂತೆ!” ಎಂದಿದ್ದರು. ಸಭಾಪತಿಗಳು ಮುಗುಳ್ನಕ್ಕಿದ್ದರು. ಆ ಮುಗುಳ್ನಗೆಗೆ ಅರ್ಥ ಮತ್ತು ಅವಕಾಶವಾಗಲಿ ಎಂಬುದೇ ಶಂಕರಮೂರ್ತಿ ಯವರನ್ನು ಬಲ್ಲವರ ಆಶಯ. ಕೋಟ ಶ್ರೀನಿವಾಸ ಪೂಜಾರಿ