ದೇವನಹಳ್ಳಿ: ಶಾರದಾಂಬೆಯ ಭಕ್ತರಾಗಿದ್ದ ಆದಿಗುರು ಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರವರ್ತಕರಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಿದರು ಎಂದು ಶಾಸಕ ಎಲ್. ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶಂಕರಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ಹಿಂದೂ ಧರ್ಮ ಹಾಗೂ ಪರಂಪರೆ ಹಿರಿಮೆಯನ್ನು ವಿಶ್ವಕ್ಕೆ ಸಾರಿದವರು ಶಂಕರಾಚಾರ್ಯರು. ನಾವೆಲ್ಲರೂ ಶಂಕರಾಚಾರ್ಯರ ತತ್ವಾದರ್ಶ ಅಳವಡಿಸಿಕೊಂಡು ಮುನ್ನಡೆಯೋಣ ಎಂದರು.
ಧಾರ್ಮಿಕ ಜಾಗೃತಿ: ಮಹಾನ್ ಚೇತನ ವಾಣಿಯನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ಸರ್ಕಾರ ನಮಗೆ ಕಲ್ಪಿಸಿಕೊಟ್ಟಿದೆ. ಶಂಕರಾಚಾರ್ಯರು ಧಾರ್ಮಿಕ ವಿಚಾರಗಳನ್ನು ಜಾಗೃತಗೊಳಿಸಿದ್ದು, ಅವು ಇಂದಿಗೂ ತಮ್ಮ ಮೌಲ್ಯ ಕಾಪಾಡಿಕೊಂಡಿದೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ನಾವು ಸಹ ದೈವವನ್ನು ನಂಬಿದ್ದೇವೆ. ಶೃಂಗೇರಿ ಶಾರದಾಪೀಠಕ್ಕೆ ದೇವೇಗೌಡರು ಸಾಕಷ್ಟು ಬಾರಿ ಭೇಟಿ ನೀಡಿ ಧಾರ್ಮಿಕತೆಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮ ಆಯೋಜಿಸಿ: ತಾಲೂಕಿನ ಎಲ್ಲಾ ಬ್ರಾಹ್ಮಣ ಸಮುದಾಯದವರನ್ನು ಒಂದೆಡೆ ಸೇರಿಸಿ ಗೀತೊಪನಿಷತ್ತು, ವೇದಗಳ ಮಂತ್ರ ಒಂದೇ ಬಾರಿ ಪಾರಾಯಣವಾಗುವ ಒಂದು ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಶಂಕರಾಚಾರ್ಯರ ತತ್ವಾದರ್ಶ ಅಳವಡಿಸಿಕೊಂಡಿದ್ದೇನೆ. ಹರಿಜನ ಎಂದು ಬಂದಿರುವುದು ಮುಕ್ಕೋಟಿ ದೇವರುಗಳಿಂದ ಬಂದಿರುತ್ತದೆ. ಲೋಕಕಲ್ಯಾಣಕ್ಕಾಗಿ ಶಂಕರಾಚಾರ್ಯರು ಶ್ರಮಿಸಿದರು ಎಂದರು.
ಶಾರದಾ ಪೀಠ ಸ್ಥಾಪನೆ: ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ದೇ.ಸೂ. ನಾಗಾರಾಜ್ ಮಾತನಾಡಿ, ಭಾರತದ 4 ಕಡೆಗಳಲ್ಲಿ ಶಂಕರಾಚಾರ್ಯರು ಪೀಠಗಳನ್ನು ಸ್ಥಾಪಿಸಿದರು. ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದ ಶೃಂಗೇರಿ ಶಾರದಾ ಪೀಠವನ್ನು ಪ್ರತಿಷ್ಠಾಪಿಸಿದರು. ಆತ್ಮ ಮತ್ತು ಪರಮಾತ್ಮನ ಬಗ್ಗೆ ಪ್ರತಿಪಾದಿಸುತ್ತಾ ಅವನತಿಯತ್ತ ಸಾಗುತ್ತಿದ್ದ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಗ್ರೇಡ್-2 ತಹಶೀಲ್ದಾರ್ ಉಷಾ, ಶಿರಸ್ತೆದಾರ್ ಭರತ್, ಅರ್ಚಕರ ಸಂಘದ ಗೌರವಾಧ್ಯಕ್ಷ ಶ್ರೀಧರ್ ದೀಕ್ಷಿತ್, ಬ್ರಾಹ್ಮಣದ ಸಂಘದ ಟೌನ್ ಅಧ್ಯಕ್ಷ ಶಿವಪ್ರಕಾಶ್, ಬಿದಲೂರು ಎಂಪಿಸಿಎಸ್ ಮಾಜಿ ಅಧ್ಯಕ್ಷ ಶಶಿಧರ್, ಸಾದಹಳ್ಳಿ ಪ್ರೌಢಶಾಲೆ ಶಿಕ್ಷಕಿ ಪ್ರತಿಮಾ, ಮುಖಂಡ ದಂಡಿಗಾನಹಳ್ಳಿ ರಘು, ಸತೀಶ್, ಡಿ.ಕೆ. ಮಹೇಂದ್ರಕುಮಾರ್, ಶಂಕರ್, ವಿನೋದ್, ಹರ್ಷ ದೇ.ಸೂ. ನಾಗರಾಜು ಹಾಗೂ ಮತ್ತಿತರರಿದ್ದರು.
ದಾರ್ಶನಿಕರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ
ಸಮಾಜ ಸುಧಾರಣೆಯಲ್ಲಿ ಶಂಕರಾಚಾರ್ಯರು ಪ್ರಮುಖ ಪಾತ್ರವಹಿಸಿದ್ದರು. ಸಮಾಜದಲ್ಲಿ ಬೇರೂರಿದ್ದ ಕಂದಾಚಾರ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಶ್ರೇಷ್ಠ ವ್ಯಕ್ತಿಗಳ ಜಯಂತಿಯಿಂದ ಮೌಲ್ಯಯುತ ಅರ್ಥಪೂರ್ಣ ಸಂದೇಶ ಸಮಾಜಕ್ಕೆ ತಲುಪಲು ಸಾಧ್ಯ. ಮಹನೀಯರ, ದಾರ್ಶನಿಕರ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಹಶೀಲ್ದಾರ್ ಶಿವರಾಜ್ ಹೇಳಿದರು.