Advertisement
ಶಂಕರನಾರಾಯಣ ಗ್ರಾಮ ಪಂಚಾಯತ್ ಗೆ ಈ ಗ್ರಾಮ ಬರುತ್ತದೆ. ಒಟ್ಟು 3,708.99 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಈ ಗ್ರಾಮ ಪಂಚಾಯತ್ ಗೆ ಶಂಕರನಾರಾಯಣವಲ್ಲದೇ ಬರುವ ಮತ್ತೂಂದು ಗ್ರಾಮ ಕುಳ್ಕುಂಜೆ. ಗ್ರಾಮದ ಜನಸಂಖ್ಯೆ 7,136. ತಲಾ 9 ಮಂದಿ ಪುರುಷ- ಮಹಿಳಾ ಗ್ರಾ.ಪಂ. ಸದಸ್ಯರಿದ್ದಾರೆ. ಇಲ್ಲಿ ಅಂಗನವಾಡಿಯಿಂದ ಆರಂಭಗೊಂಡು ಸ್ನಾತಕೋತ್ತರ ಅಧ್ಯಯನ ಕೇಂದ್ರದವರೆಗಿನ (ಸರಕಾರಿ ಹಾಗೂ ಖಾಸಗಿ )ಶಿಕ್ಷಣ ಸಂಸ್ಥೆಗಳಿರುವುದು ವಿಶೇಷ.
Related Articles
Advertisement
ಇಲ್ಲಿನ ಉಪನೋಂದಣಿ ಕಚೇರಿಯು ಗುಡ್ಡದ ಮೇಲಿದ್ದು, ಅದಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಇಲ್ಲಿನ ಗ್ರಾ.ಪಂ., ಅಂಚೆ ಕಚೇರಿ, ಉಪ ನೋಂದಣಿ ಕಚೇರಿ ಹೀಗೆ ಎಲ್ಲ ರೀತಿಯ ಕಚೇರಿಗಳು, ಮಿನಿ ವಿಧಾನಸೌಧ ಮಾದರಿಯ ಕಟ್ಟಡದಲ್ಲಿ ಒಂದೇ ಸೂರಿನಡಿ ಬಂದರೆ ಜನರಿಗೆ ಅನುಕೂಲವಾಗಲಿದೆ.
ಪ್ರಮುಖ ಬೇಡಿಕೆಗಳು
-ಶಂಕರನಾರಾಯಣ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ, ಈ ಠಾಣೆ ಹಾಗೂ ಅಮಾಸೆಬೈಲು ಠಾಣೆ ಸೇರಿಸಿಕೊಂಡು, ವೃತ್ತ ನಿರೀಕ್ಷಕರ ಕಚೇರಿಯನ್ನಾಗಿಸಬೇಕು.
-ಇಲ್ಲಿನ ಪಶು ಆಸ್ಪತ್ರೆ ಮೇಲ್ದರ್ಜೆಗೆರಿದರೂ 2 ವರ್ಷದಿಂದ ಪಶು ವೈದ್ಯ ಹುದ್ದೆ ಖಾಲಿಯಿದ್ದು, ಶೀಘ್ರ ನೇಮಕವಾಗಬೇಕು.
– ರೈತ ಸಂಪರ್ಕ ಕೇಂದ್ರ ರಚನೆಗೆ ಸಿಬಂದಿ ಕೊರತೆ ಎಂಬ ಇಲಾಖಾಧಿಕಾರಿಗಳ ಕುಂಟು ನೆಪ ನಿವಾರಿಸಿ ಜನರಿಗೆ ಸೌಲಭ್ಯ ಕಲ್ಪಿಸುವುದು.
– ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬರುವುದರಿಂದ ಅವರಿಗೆ ಅನುಕೂಲವಾಗುವಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚಿನ ಸರಕಾರಿ ಬಸ್‌ಗಳನ್ನು ಒದಗಿಸಬೇಕು.
– ಇಲ್ಲಿಗೆ ವಿದ್ಯುತ್ ಉಪ ವಿಭಾಗ ಮಂಜೂರಾಗಿದ್ದು, ಕಟ್ಟಡ ಕಟ್ಟಲು ನಿವೇಶನ ಒದಗಿಸಬೇಕು.
-ಇಲ್ಲಿನ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ಸರಕಾರಿ ಐಟಿಐ ಕಾಲೇಜು ಆರಂಭಿಸಬೇಕು.
ಪುರಾತನ ಹಿನ್ನೆಲೆ
ಇಲ್ಲಿನ ಕ್ರೋಢ ಶಂಕರನಾರಾಯಣ ಕ್ಷೇತ್ರವು ಪುರಾತನ ಕ್ಷೇತ್ರಗಳಲ್ಲಿ ಒಂದು. ಸಹಜ ಪ್ರಕೃತಿ ಸೌಂದರ್ಯವು ಭಕ್ತರು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎತ್ತರದಲ್ಲಿ ಕ್ರೋಢಗಿರಿಯಿದ್ದು, ಅಲ್ಲಿ ಕ್ರೋಢಮುನಿಗಳ ಆಶ್ರಮ, ತಪ್ಪಲಿನ ಕೊಳದಲ್ಲಿ ಶ್ರೀ ಶಂಕರನಾರಾಯಣ ಸ್ವಾಮಿಯ ಲಿಂಗೋದ್ಭವವಿದೆ. ಕಡು ಬೇಸಗೆ, ಮಳೆಗಾಲದಲ್ಲಿಯೂ ಒಂದೆ ತೆರನಾದ ನೀರಿರುತ್ತದೆ. ಅಂದು ಟಿಪ್ಪು ಸುಲ್ತಾನ್ ಇಲ್ಲಿಗೆ ದಾಳಿ ಮಾಡಿದ್ದು, ಆಗ ಆತನ ಮನ:ಪರಿವರ್ತನೆಯಾಗಿ, ದಾಳಿ ವೇಳೆ ಸಿಕ್ಕ ಚಿನ್ನ , ಬೆಳ್ಳಿ , ದೊಡ್ಡ ಗಂಟೆ, ಸಲಾಂ ಟೋಪಿಯನ್ನು ಇಲ್ಲಿಯೇ ಅರ್ಪಿಸಿ ಕೈ ಮುಗಿದು ಹೋಗಿದ್ದ ಎನ್ನುತ್ತದೆ ಇತಿಹಾಸ. ಜನಪ್ರತಿನಿಧಿಗಳು, ಅಧಿಕಾರಿಗಳೂ ಆದ್ಯತೆಯ ಮೇರೆಗೆ ಜನರ ಬೇಡಿಕೆ ಈಡೇರಿಸಬೇಕಿದೆ.
ಪ್ರಸ್ತಾವನೆ ಸಲ್ಲಿಕೆ: ತಾಲೂಕು ಹಾಗೂ ಹೋಬಳಿ ರಚನೆ ಬಗ್ಗೆ ಈಗಾಗಲೇ ಸರಕಾರಕ್ಕೆ, ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಿಗೆ ಗ್ರಾ.ಪಂ.ನಿಂದ ಮನವಿ ಸಲ್ಲಿಸಿದ್ದೇವೆ. ಉಪ ನೋಂದಣಿ ಕಚೇರಿ, ಪಂಚಾಯತ್ ಸಹಿತ ಎಲ್ಲವೂ ಒಂದೇ ಸೂರಿನಡಿ ಬರುವಂತಾಗಲು ಈಗಾಗಲೇ ಗ್ರಾ.ಪಂ.ನಿಂದ ಅಗತ್ಯವಿರುವ ಜಾಗ ಗುರುತಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಬೇಕಿದೆ. – ಲತಾ ದೇವಾಡಿಗ, ಅಧ್ಯಕ್ಷರು, ಶಂಕರನಾರಾಯಣ ಗ್ರಾ.ಪಂ.
ಸರಕಾರ ಎಚ್ಚೆತ್ತುಕೊಳ್ಳಲಿ: ಶಂಕರನಾರಾಯಣ ತಾಲೂಕು, ಹೋಬಳಿ ರಚನೆ ಬಗ್ಗೆ ಅನೇಕ ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸುಮಾರು 5 ಸಾವಿರ ಅಂಚೆ ಕಾರ್ಡ್ ಚಳವಳಿಯನ್ನು ನಡೆಸಿದ್ದೆವು. ಅನೇಕ ಮಂದಿ ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡಿದ್ದರೂ, ಬೇಡಿಕೆ ಮಾತ್ರ ಈಡೇರಿಲ್ಲ. ಸರಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. – ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು ಶಂಕರನಾರಾಯಣ ತಾ| ರಚನೆ ಹೋರಾಟ ಸಮಿತಿ
– ಪ್ರಶಾಂತ್ ಪಾದೆ