ಯಾವುದೇ ಸ್ಟಾರ್ ಇರಲಿ ಅಥವಾ ಸಾಮಾನ್ಯನೇ ಇರಲಿ, ಪ್ರತಿಯೊಬ್ಬರೂ ಅವರ ಜೀವನದಲ್ಲಿ ಮತ್ತೂಬ್ಬರಿಗೆ ಖಂಡಿತಾ ‘ಫ್ಯಾನ್’ ಆಗಿರುತ್ತಾರೆ. ತನ್ನ ಜೀವನದಲ್ಲಿ ಗೊತ್ತಿಧ್ದೋ, ಗೊತ್ತಿಲ್ಲದೆಯೋ ಪರಿಣಾಮ ಬೀರಿದ ಅನೇಕ ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವಗಳನ್ನು ಆರಾಧಿಸುತ್ತಿರುತ್ತಾರೆ. ಈಗ ಯಾಕೆ ಈ ‘ಫ್ಯಾನ್’ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಕನ್ನಡದಲ್ಲಿ ಈಗ ‘ಫ್ಯಾನ್’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಕಳೆದ ಆಗಸ್ಟ್‌ನಲ್ಲಿ ಸದ್ದಿಲ್ಲದೆ ಸೆಟ್ಟೇರಿದ್ದ ‘ಫ್ಯಾನ್’ ಚಿತ್ರ ಅಂತಿಮವಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೇ ಆಗಸ್ಟ್ 23ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ತನ್ನ ಪ್ರಮೋಶನ್ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟೀಸರ್ ಮತ್ತು ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದೆ.
ಸುಮಾರು 14 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ, ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ದರ್ಶಿತ್ ಭಟ್, ‘ಫ್ಯಾನ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ದರ್ಶಿತ್ ಭಟ್, ‘ಈ ಚಿತ್ರದಲ್ಲಿ ಒಬ್ಬ ಅಭಿಮಾನಿಯ ಅಭಿಮಾನದ ಕಥೆ ಇದೆ. ಒಬ್ಬ ಸ್ಟಾರ್ ಮತ್ತೂಬ್ಬ ಅಭಿಮಾನಿಯ ಸಂಬಂಧ ಎಂಥದ್ದು ಎಂಬ ಅಂಶವೇ ಚಿತ್ರದ ಒಂದು ಎಳೆ. ಒಂದು ಕಂಟೆಂಟ್ ಸಿನಿಮಾ ನೋಡಬೇಕು ಎಂದು ಕಾಯುತ್ತ ಕುಳಿತವರಿಗೆ ಈ ಸಿನಿಮಾ ಖಂಡಿತ ನಿರಾಸೆ ಮಾಡಲಾರದು. ಇಂದಿಗೂ ಅಸಂಖ್ಯಾತ ಫ್ಯಾನ್ಸ್ ಹೊಂದಿರುವ ನಟ, ನಿರ್ದೇಶಕ ಶಂಕರ್‌ನಾಗ್ ಅವರಿಗೂ ಚಿತ್ರಕ್ಕೂ ಒಂದು ನಂಟಿದೆ. ಹಾಗಾಗಿಯೇ ಶಂಕರ್‌ನಾಗ್ ಹುಟ್ಟಿ, ಬೆಳೆದ ಊರಿನಲ್ಲೇ ಮೊದಲ ಬಾರಿಗೆ ನಮ್ಮ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಶಂಕರ್‌ನಾಗ್ ಬದುಕಿದ್ದಾಗ ಆಡಿದ ನುಡಿಮುತ್ತೂಂದನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವ ಆ ಸಾಲುಗಳು ನಮ್ಮ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಬಹಳ ಹೊಂದಾಣಿಕೆಯಾಗುತ್ತದೆ. ಅದು ಏನು ಅನ್ನೋದನ್ನ ಚಿತ್ರದಲ್ಲೇ ನೋಡಬೇಕು. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಂಗತಿಗಳು ಚಿತ್ರದಲ್ಲಿದ್ದು, ಈಗಾಗಲೇ ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ಇನ್ನು ‘ಫ್ಯಾನ್’ ಚಿತ್ರದಲ್ಲಿ ನವನಟ ಆರ್ಯನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದು ಜನಪ್ರಿಯ ಸೀರಿಯಲ್ ಒಂದರಲ್ಲಿ ಅಭಿನಯಿಸುತ್ತಿರುವ ಹೀರೋ ಪಾತ್ರವಂತೆ. ಇನ್ನು ಚಿತ್ರದ ಒಬ್ಬ ನಾಯಕಿ ಅದ್ವಿತಿ ಶೆಟ್ಟಿ ಉತ್ತರ ಕನ್ನಡದ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡರೆ, ಮತ್ತೂಬ್ಬ ನಾಯಕಿ ಸಮೀಕ್ಷಾ ಸೀರಿಯಲ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರಂತೆ.
‘ಎಸ್‌ಎಲ್ಎನ್ ಸಿನಿಮಾಸ್’ ಬ್ಯಾನರ್‌ನಲ್ಲಿ ಸವಿತಾ ಈಶ್ವರ್ ಮತ್ತು ಶಶಿಕಿರಣ್ ಎಂ.ಇ ಜಂಟಿಯಾಗಿ ‘ಫ್ಯಾನ್’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿಕ್ರಮ್ ಚಂದನಾ ಸಂಗೀತ ಸಂಯೋಜನೆಯಿದ್ದು, ಬಿ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ವಿ. ಪವನ್ ಕುಮಾರ್ ಛಾಯಾಗ್ರಹಣ, ಗಣಪತಿ ಭಟ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಒಟ್ಟಾರೆ ತನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಬಿಡುಗಡೆಗೂ ಮೊದಲೇ ಒಂದಷ್ಟು ಸೌಂಡ್ ಮಾಡುತ್ತಿರುವ ‘ಫ್ಯಾನ್’ ಕನ್ನಡದ ಸಿನಿಮಾ ‘ಫ್ಯಾನ್ಸ್’ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.