ಹಾವೇರಿ: ರಾಜ್ಯ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟದಲ್ಲಿ ಸಚಿವ ಸ್ಥಾನ ‘ಕೈ’ ತಪ್ಪಿಸಿಕೊಂಡಿದ್ದ ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್. ಶಂಕರ್ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ದೊರಕಿದ್ದು ಜಿಲ್ಲೆಯ ರಾಜಕಾರಣದಲ್ಲಿಯೂ ಸಂಚಲನ ಮೂಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಧುರೀಣ ಕೆ.ಬಿ. ಕೋಳಿವಾಡ ಅವರನ್ನು ಸೋಲಿಸಿದ ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಸಚಿವ ಸ್ಥಾನ ನೀಡಿರುವುದು ಕೆ.ಬಿ. ಕೋಳಿವಾಡ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಇರುಸುಮುರುಸು ಉಂಟು ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್. ಶಂಕರ್ ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಭಾರೀ ಬೇಡಿಕೆ ಬಂದು, ಶಾಸಕರಾಗಿ ಆಯ್ಕೆಯಾದ ಪ್ರಥಮ ಬಾರಿಗೇ ಸಚಿವ ಸ್ಥಾನ ಒಲಿದು ಬಂದಿತ್ತು.
ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಆರ್. ಶಂಕರ್ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಲಿಲ್ಲ ಎಂಬ ಕಾರಣಕ್ಕೆ ಅವರಿಂದ ಸಚಿವ ಸ್ಥಾನ ವಾಪಸ್ ಪಡೆಯಲಾಗಿತ್ತು. ಇದರಿಂದ ಮುನಿಸಿಕೊಂಡ ಶಂಕರ್ ಲೋಕಸಭೆ ಚುನಾವಣೆ ವೇಳೆ ತಟಸ್ಥ ಧೋರಣೆ ಅನುಸರಿಸಿದ್ದರು. ಆದರೆ, ಕ್ಷೇತ್ರದ ಅವರ ಅಭಿಮಾನಿಗಳು ಬಹಿರಂಗವಾಗಿಯೇ ಬಿಜೆಪಿಯನ್ನು ಬೆಂಬಲಿಸಿದ್ದರು. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ 26567 ಮತಗಳ ಮುನ್ನಡೆ ಸಾಧಿಸಿತ್ತು. ತನ್ಮೂಲಕ ಲೋಕಸಭೆ ಚುನಾವಣೆಯಲ್ಲಿಯೂ ಆರ್. ಶಂಕರ್ ಪರೋಕ್ಷವಾಗಿ ಕಾಂಗ್ರೆಸ್ ಬಲ ಕುಗ್ಗುವಂತೆ ಮಾಡಿದ್ದರು. ಇಷ್ಟೆಲ್ಲ ನಡೆದ ಬಳಿಕ ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಒಪ್ಪಂದದಲ್ಲಿ ಮತ್ತೆ ಸಂಪುಟ ಸೇರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವುದು ಕಾಂಗ್ರೆಸ್‌ನ ಕೆಲ ಧುರೀಣರ ಕಣ್ಣು ಕೆಂಪಾಗಿಸಿದೆ.
2ನೇ ಬಾರಿ ಜಯ: 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಬಿ. ಕೋಳಿವಾಡ ಅವರಿಗೆ ಕಠಿಣ ಪೈಪೋಟಿಯೊಡ್ಡಿ, ಕೇವಲ 6788 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2018 ವಿಧಾನಸಭೆ ಚುನಾವಣೆ ಪೂರ್ವ ವಿವಿಧ ರಾಷ್ಟ್ರೀಯ ಪಕ್ಷಗಳು ಅವರನ್ನು ಆಹ್ವಾನಿಸಿದ್ದವು. ಬೇರೆ ಪಕ್ಷಗಳಿಗೆ ಹೋಗದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದ ‘ಆಟೋ’ ಚಿಹ್ನೆಯೊಂದಿಗೆ ಸ್ಪರ್ಧಿಸಿದ ಆರ್. ಶಂಕರ್, ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನು 4338 ಮತಗಳಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ವಿಧಾನಸಭೆ ಪ್ರವೇಶಿಸಿದ ಮೊದಲ ಅವಧಿಯಲ್ಲಿಯೇ ಆರ್. ಶಂಕರ್‌ಗೆ ಎರಡು ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಂತಾಗಿದೆ.
ಸೋತರೂ ಭವ್ಯ ಮನೆ: 2013ರ ಚುನಾವಣೆಯಲ್ಲಿ ಸೋತ ಬಳಿಕ ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳದ ಆರ್. ಶಂಕರ್, ಸೋತ ದಿನದಿಂದಲೇ 2018ರ ಚುನಾವಣೆಗೆ ಗೆಲ್ಲುವ ಯೋಜನೆ ರೂಪಿಸಿಕೊಂಡಿದ್ದರು. ಬಳಿಕ ರಾಣಿಬೆನ್ನೂರಿನ ಚೋಳಮರಡೇಶ್ವರ ನಗರದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ‘ನಮ್ಮ ಮನೆ, ನಮ್ಮ ಕಚೇರಿ’ ಎಂಬ ಭವ್ಯ ಮನೆ ಕಟ್ಟಿಸಿ ತನ್ಮೂಲಕ ಮತದಾರರಿಗೆ ಚುನಾವಣೆಯಲ್ಲಿ ಸೋಲಲಿ, ಗೆಲ್ಲಲ್ಲಿ ಕ್ಷೇತ್ರದ ಮತದಾರರ ಸೇವೆಗಾಗಿ ಕ್ಷೇತ್ರದಲ್ಲೇ ಇರುತ್ತೇನೆ ಹಾಗೂ ತಾವು ಕ್ಷೇತ್ರದ ಹೊರಗಿನವನಲ್ಲ ಎಂಬ ಸಂದೇಶ ನೀಡಿದ್ದರು. 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಕ್ಷೇತ್ರದಲ್ಲಿ ಜನರಿಗೆ ಸಿಕ್ಕಿದ್ದೇ ವಿರಳ ಎಂಬುದು ವಿಪರ್ಯಾಸ.
ಆರ್. ಶಂಕರ್ ಕಲಿತದ್ದು ಎಸ್‌ಎಸ್‌ಎಲ್ಸಿ:
ಆರ್. ಶಂಕರ್ ಮೂಲತಃ ಬೆಂಗಳೂರು ಮೂಲದವರಾಗಿದ್ದು ತಂದೆ ರಾಮಚಂದ್ರಪ್ಪ ಕೃಷಿಕರು. ತಾಯಿ ಲಕ್ಷ್ಮಿ ದೇವಿ. ಪತ್ನಿ ಎಂ.ಎಸ್. ಧನಲಕ್ಷ್ಮಿ . ಶಂಕರ್ ಅವರಿಗೆ ಒಬ್ಬ ಮಗ, ಮಗಳು ಇದ್ದಾರೆ. 53 ವರ್ಷ ವಯೋಮಾನದ (1-2-1965 ಜನನ) ಶಂಕರ್ ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಓದಿದ್ದು ಎಸ್‌ಎಸ್‌ಎಲ್ಸಿ. 2004ರಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರಾಗಿ ರಾಜಕಾರಣಕ್ಕೆ ಬಂದವರು. ಬಳಿಕ ಉಪಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. 2012ರಲ್ಲಿ ತಮ್ಮ ಸಮಾಜದವರು (ಕುರುಬ) ಹೆಚ್ಚಿರುವ ರಾಣಿಬೆನ್ನೂರು ಕ್ಷೇತ್ರವನ್ನು ರಾಜಕಾರಣಕ್ಕೆ ಆಯ್ದುಕೊಂಡು ಜಿಲ್ಲೆಗೆ ಕಾಲಿಟ್ಟರು.
ಹಾವೇರಿ ಉಸ್ತುವಾರಿ?:
ಸಂಪುಟದಲ್ಲಿ ಮೊದಲ ಬಾರಿ ಸಚಿವ ಸ್ಥಾನ ಪಡೆದುಕೊಂಡಿದ್ದರೂ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗದೆ ಇರುವುದರಿಂದ ಕಾಂಗ್ರೆಸ್, ಆರ್. ಶಂಕರ್‌ಗೆ ತವರು ಜಿಲ್ಲೆ ಹಾವೇರಿಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿರಲಿಲ್ಲ. ಬದಲಾಗಿ ಕೊಪ್ಪಳ ಜಿಲ್ಲೆ ಉಸ್ತುವಾರಿ ನೀಡಲಾಗಿತ್ತು. ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಜಮೀರ್ ಅಹ್ಮದ್ ಅವರಿಗೆ ನೀಡಲಾಗಿತ್ತು. ಆರ್. ಶಂಕರ್ ಈಗ ಕಾಂಗ್ರೆಸ್‌ನೊಂದಿಗೆ ವಿಲೀನವಾಗಿರುವುದರಿಂದ ಅವರಿಗೇ ಹಾವೇರಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಡುವ ನಿರೀಕ್ಷೆ ಇದೆ.
•ಎಚ್.ಕೆ. ನಟರಾಜ