Advertisement

ಕೆಲ ಹೊತ್ತಿನಲ್ಲೇ ರಾಗ ಬದಲಿಸಿದ ಶಂಕರ್‌

11:18 PM Nov 15, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರೆಲ್ಲರಿಗೂ ಟಿಕೆಟ್‌ ನೀಡುವ ಭರವಸೆಯಂತೆ ತಮಗೂ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಬೇಕೆಂದು ಶುಕ್ರವಾರ ಬೆಳಗ್ಗೆಯೂ ಪಟ್ಟು ಹಿಡಿಸಿದ್ದ ಮಾಜಿ ಸಚಿವ ಆರ್‌.ಶಂಕರ್‌, ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾದ ಕೆಲ ಹೊತ್ತಿನ ಬಳಿಕ ವಿಧಾನ ಪರಿಷತ್‌ ಸದಸ್ಯರಾಗಿ, ಸಚಿವರಾಗಲು ಒಪ್ಪಿರುವುದಾಗಿ ಹೇಳಿ ಗೊಂದಲಕ್ಕೆ ತೆರೆ ಎಳೆದರು.

Advertisement

ಇದಕ್ಕೂ ಮೊದಲು ಶಂಕರ್‌ ಬೆಂಬಲಿಗರು ಟಿಕೆಟ್‌ಗೆ ಆಗ್ರಹಿಸಿ ಯಡಿಯೂರಪ್ಪ ಅವರ ಡಾಲರ್ ಕಾಲೋನಿಯ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಶಂಕರ್‌ ರಾಗ ಬದಲಿಸಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಂತೆ ಅವರ ವಿರುದ್ಧವೇ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ ಪ್ರಹಸನವೂ ನಡೆಯಿತು. ಶುಕ್ರವಾರ ಬೆಳಗ್ಗೆ ಪ್ರತಿಕ್ರಿಯಿಸಿದ ಶಂಕರ್‌, ನಾನು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.

ಆದರೆ ನಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ನನಗೆ ಟಿಕೇಟ್‌ ಕೊಡಲೇಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ನಿವಾಸದ ಬಳಿ ಜಮಾಯಿಸಿದ್ದ ಶಂಕರ್‌ ಬೆಂಬಲಿಗರು ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ಪೊಲೀಸರು ತಡೆದರು. ನಮ್ಮ ನಾಯಕರನ್ನು ಬಿಜೆಪಿ ಬಳಸಿಕೊಂಡು ಇದೀಗ ಬೇಡ ಅನ್ನುವುದು ಎಷ್ಟು ಸರಿ? ಸರ್ಕಾರ ರಚನೆಗಾಗಿ ಅವರು ರಾಜೀನಾಮೆ ನೀಡಿದ್ದು, ಇದೀಗ ಟಿಕೆಟ್‌ ನೀಡದೆ ಅವರನ್ನು ಬೀದಿಗೆ ತಂದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಯಡಿಯೂರಪ್ಪ ನಿವಾಸದ ಬಳಿ ಕಂಡ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನೂ ಸುತ್ತುವರಿದ ಬೆಂಬಲಿಗರು ಟಿಕೆಟ್‌ ಕೊಡಿಸುವಂತೆ ಮನವಿ ಮಾಡಿದರು. ನೀವೇ ರಾಜೀನಾಮೆ ಕೊಡಿಸಿ ಇದೀಗ ಟಿಕೆಟ್‌ ಕೊಡಿಸದಿರುವುದು ಎಷ್ಟು ಸರಿ ಎಂದು ರಮೇಶ್‌ ಜಾರಕಿಹೊಳಿ ಅವರನ್ನು ಪ್ರಶ್ನಿಸಿದ ಬೆಂಬಲಿಗರು ಅವರ ಕಾರಿಗೆ ಅಡ್ಡಲಾಗಿ ಕುಳಿತು ಟಿಕೆಟ್‌ ಕೊಡಿಸುವಂತೆ ಆಗ್ರಹಿಸಿದರು. ಈ ವೇಳೆ ಪೊಲೀಸರು ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಗ ಬದಲಿಸಿದ ಶಂಕರ್‌: ಯಡಿಯೂರಪ್ಪ ಭೇಟಿ ಬಳಿಕ ಪ್ರತಿಕ್ರಿಯಿಸಿದ ಶಂಕರ್‌, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಟಿಕೆಟ್‌ಗೆ ಮನವಿ ಮಾಡಿದ್ದೇನೆ. ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಅವರ ಮಾತಿಗೆ ಒಪ್ಪಿಕೊಂಡಿದ್ದೇನೆ. ಯಾರೇ ಅಭ್ಯರ್ಥಿಯಾದರೂ ನಾವು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.

Advertisement

ಬೆಂಬಲಿಗರ ಬೇಸರ: ಆರ್‌.ಶಂಕರ್‌ ನಿರ್ಧಾರಕ್ಕೆ ಅವರ ಬೆಂಬಲಿಗರೇ ಬೇಸರ ವ್ಯಕ್ತಪಡಿಸಿದ್ದು, ಕೆಲವರು ಕಣ್ಣೀರು ಹಾಕಿದರು. ಮುಖ್ಯಮಂತ್ರಿಗಳ ನಿವಾಸಕ್ಕೆ ಹೋಗುವ ಮೊದಲು ಒಂದು ಮಾತು ಹೇಳಿ, ಇದೀಗ ಹೊರಗೆ ಬಂದು ಬೇರೊಂದು ಮಾತು ಹೇಳುವುದು ಸರಿಯಲ್ಲ. ತಮಗೆ ಅನ್ಯಾಯವಾಗಿದೆ ಎಂದು ನ್ಯಾಯ ಕೇಳಲು ಬಂದರೆ ನೀವು ಒಳಗೆ ಹೋಗಿ ರಾಜಿ ಮಾಡಿಕೊಂಡು ಮಾತು ಬದಲಾ ಯಿಸಿದ್ದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಕಣ್ಣೀರು ಹಾಕಿದ್ದು ಕಂಡುಬಂತು. ಬೆಂಬಲಿಗರ ಘೋಷಣೆ, ಮುತ್ತಿಗೆ ಪ್ರಯತ್ನದ ಹಿನ್ನೆಲೆಯಲ್ಲಿ ಪೊಲೀಸರು ಮುಖ್ಯಮಂತ್ರಿಗಳ ನಿವಾಸಕ್ಕೆ ಭದ್ರತೆ ಹೆಚ್ಚಿಸಿದರು.

ಸಚಿವರನ್ನಾಗಿ ಮಾಡಲಾಗುವುದು – ಬಿಎಸ್‌ವೈ: ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ, ಆರ್‌. ಶಂಕರ್‌, ಅವರ ಪತ್ನಿಯೊಂದಿಗೆ ಗುರುವಾರ ಮಾತುಕತೆ ನಡೆಸಿದ್ದು, ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಾನು ಶಂಕರ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ.

ಅರುಣ್‌ ಕುಮಾರ್‌ ಪೂಜಾರ್‌ ಉತ್ತಮ ಅಭ್ಯರ್ಥಿಯಾಗಿದ್ದು, ಅವರ ಪರ ಕೆಲಸ ಮಾಡುವಂತೆ ಹೇಳಿದ್ದು, ಅವರೂ ಒಪ್ಪಿದ್ದಾರೆ. ಆ ಮೂಲಕ ಸಮಸ್ಯೆ ಬಗೆಹರಿದಿದೆ ಎಂದು ಹೇಳಿ ದರು. ಶಂಕರ್‌ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು ನಿಜ. ಆದರೆ ವಿಶೇಷ ಕಾರಣ ಗಳಿಂದ ಅವರಿಗೆ ಟಿಕೆಟ್‌ ನೀಡಿಲ್ಲ. ಈಗಾಗಲೇ ಅವರ ಮನವೊಲಿಸಲಾಗಿದೆ. ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುತ್ತೇನೆ. ನಂಬಿಕೆ ದ್ರೋಹ ಮಾಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next