ರಬಕವಿ-ಬನಹಟ್ಟಿ: ಶತಮಾನದ ಇತಿಹಾಸ ಹೊಂದಿರುವ `ಮ್ಯಾಂಚೇಸ್ಟರ್’ ನಗರಿ ರಬಕವಿ-ಬನಹಟ್ಟಿ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಸರ್ಕಾರ ನಡೆಸಿಕೊಂಡ ಕಾರ್ಯ ಬೇಸರ ತರುವಂಥದ್ದು, ನೆರೆಯ ಆಂಧ್ರ, ತಮಿಳನಾಡು, ಮಹಾರಾಷ್ಟ್ರಗಳಲ್ಲಿರುವ ಜವಳಿ ಸೌಲಭ್ಯ ರಾಜ್ಯದಲ್ಲಿಲ್ಲ. ನೇಕಾರರಿಂದಲೇ ಸೃಷ್ಟಿಯಾಗಿರುವ ನೂಲಿನ ಗಿರಣಿಯ 30 ಎಕರೆಯಷ್ಟು ಜಾಗೆಯನ್ನು ಅಧಿಕೃತವಾಗಿ ಒದಗಿಸುವಲ್ಲಿ ಮೀನಾಮೇಷವೆನಿಸುತ್ತಿರುವುದೇ ನೇಕಾರರ ಮೇಲಿರುವ ನಿರ್ಲಕ್ಷ್ಯ ಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ತೀವ್ರ ನೊಂದು ಹೇಳಿದರು.
ರವಿವಾರ ರಾತ್ರಿ ತವರೂರಾದ ಬನಹಟ್ಟಿಯಲ್ಲಿ ದಿ. ಮಹಾದೇವಪ್ಪ ಭದ್ರನ್ನನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಎಚ್‌ಡಿಸಿ ನಿಗಮದಿಂದ ನೇಕಾರರಿಗೆ ವಂಚನೆ ಮಾಡುವ ಕಾರ್ಯ ನಡೆಯುತ್ತಿದೆ. ನಿಗಮ ಉನ್ನತಿಸಿಕೊಂಡು ಆಧುನಿಕ ಮಗ್ಗಗಳ ನಿರ್ಮಿಸಬೇಕಿದೆ. ಕಳೆದ 6 ದಶಕಗಳಿಂದ ನೇಕಾರಿಕೆಯಲ್ಲಿ ಪಾವರ್‌ಲೂಮ್ ನಂತರ ಅಭಿವೃದ್ಧಿಯನ್ನೇ ಹೊಂದಿಲ್ಲ. ಇವೆಲ್ಲ ಸಮಸ್ಯೆಗಳನ್ನು ಹೊತ್ತು ನೂರಾರು ಸಂಘಟನೆಗಳನ್ನು ಮಾಡದೆ ಒಂದೇ ಸಂಘಟಿತ ಧ್ವನಿಯಾಗಿ ನೇಕಾರರ ಪರ ನಿಲ್ಲಬೇಕೆಂದು ಬಿದರಿ ಹೇಳಿದರು.
ಬದುಕಿನಲ್ಲಿ ನುಡಿದಂತೆ ನಡೆಯುವವರೇ ಶರಣರಾಗಿ ಮಹಾನ್ ವ್ಯಕ್ತಿಗಳಾಗಲು ಸಾಧ್ಯ. ಇದೇ ಸಾಲಿನಲ್ಲಿ ದಿ. ಮಹಾದೇವಪ್ಪ ಭದ್ರನ್ನವರ ಕೂಡ ನಿಲ್ಲುವರು. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರವೆಂದರು.
ಎಲ್ಲ ರಂಗಗಳಲ್ಲಿಯೂ ಕರ್ಮಯೋಗಿ ಕಾರ್ಯ ಸರ್ವ ಶ್ರೇಷ್ಠ. ಹಿರಿಯರ ಸ್ಮರಣೆ, ಆದರ್ಶಗಳನ್ನು ರೂಢಿಸಿಕೊಂಡು ಬದುಕು ಸಾಗಿಸಿದರೆ ಆಚರಣೆಗಳಿಗೆ ನೈಜ ಅರ್ಥದೊಂದಿಗೆ ಸುಂದರ ಬದುಕು ನಮ್ಮದಾಗಬಹುದೆಂದು ಬಿದರಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಹಿರೇಮಠದ ಶರಣಬಸವ ಶಿವಾಚಾರ್ಯರು, ರಬಕವಿ ಗುರುಸಿದ್ಧೇಶ್ವರ ಶ್ರೀಗಳು ವಹಿಸಿದ್ದರು. ನ್ಯಾಯವಾದಿ ಎಂ.ಜಿ. ಕೆರೂರ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಎಂ.ಎಸ್. ಮುನ್ನೋಳ್ಳಿ, ಜಗದೀಶ ಗುಡಗುಂಟಿಮಠ, ರವೀಂದ್ರ ಕಲಬುರ್ಗಿ, ಅರುಣಕುಮಾರ ಶಹಾ, ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ಸುಭಾಸಚಂದ್ರ ಭದ್ರನ್ನವರ, ರಾಜು ಭದ್ರನ್ನವರ ಸೇರಿ ಅನೇಕರಿದ್ದರು.
ಇದನ್ನೂ ಓದಿ : ರಾಗಿ ಕಟಾವಿಗೆ ಮಧ್ಯವರ್ತಿಗಳ ಹಾವಳಿ, ಬೆಲೆ ನಿಗದಿಗೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ