ಶನಿವಾರಸಂತೆ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಒಡೆಯನಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಿಡ್ತ ಗ್ರಾ.ಪಂ.ಸದಸ್ಯೆ ನಳಿನಿರಾಮು ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ಪ್ರತಿಯೊಬ್ಬ ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಿದಾಗ ಆರೋಗ್ಯವಂತ ಮಗುವನ್ನು ಪಡೆ ಯಲು ಸಾಧ್ಯವಾಗುತ್ತದೆ ಎಂದರು.
ಸರಕಾರದಿಂದ ಗರ್ಭಿಣಿ, ಬಾಣಂತಿ ಯರಿಗಾಗಿ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಪಡೆದುಕೊಳ್ಳುವುದರ ಮೂಲಕ ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಮಾಹಿತಿ ನೀಡಿ, ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಪ್ರತಿ ಹಂತಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಯಕ್ಕೆ ಸರಿಯಾಗಿ ಉತ್ತಮ ಪೌಷ್ಟಿಕ ಆಹಾರದ ಜತೆಯಲ್ಲಿ ಪೌಷ್ಟಿಕಾಂಶ ಒಳಗೊಂಡಿರುವ ಮಾತ್ರೆಗಳನ್ನು ಸೇವಿಸಬೇಕೆಂದರು. ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿರುವ ನಿಟ್ಟಿನಲ್ಲಿ ಮಗುವಿಗೆ 2 ವರ್ಷಗಳ ವರೆಗೂ ತಾಯಿ ಎದೆಹಾಲನ್ನು ಕೊಡಬೇಕು ಇದರಿಂದ ಮಾತ್ರ ಮಗು ಆರೋಗ್ಯವಂತವಾಗಿ ಬೆಳೆಯುತ್ತದೆ ಎಂದರು. ಆಶಾ ಕಾರ್ಯಕರ್ತೆ ಎಂ.ಆರ್.ರಾಣಿ ಮಾಹಿತಿ ನೀಡಿದರು. ಕಿರಿಯ ಆರೋಗ್ಯ ಸಹಾಯಕಿ ಎಚ್. ಜಿ.ಶ್ವೇತಾ, ಒಡೆಯನಪುರ ಅಂಗನವಾಡಿ ಕೇಂದ್ರದ ಶಿಕ್ಷಕಿ ಎಸ್.ಎಲ್.ಧನ್ಯಾ, ಆಶಾ ಕಾರ್ಯಕರ್ತೆಯರಾದ ಸುಧಾ ಮಣಿ, ವೀಣಾ, ಅಂಗನವಾಡಿ ಶಿಕ್ಷಕಿ ಯರಾದ ಮೀನಾಕ್ಷಿ, ಫಾತೀಮಾ, ಶಿಲ್ಪ ಸುರೇಶ್, ಕಲ್ಯಾಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅತ್ಯುತ್ತಮ ಆರೋಗ್ಯವಂತ ಮೂರು ಶಿಶುಗಳಿಗೆ ಬಹುಮಾನ ವಿತರಿಸಲಾಯಿತು.