Advertisement

ಸೂಪರ್‌ಮಾರ್ಕೆಟ್‌ಗಳಿಗೆ ಜನರ ಮುತ್ತಿಗೆ! ಶಾಂಘೈನಲ್ಲಿ ಲಾಕ್‌ಡೌನ್‌ ಸಡಿಲಿಕೆ

06:36 PM Apr 12, 2022 | Team Udayavani |

ಬೀಜಿಂಗ್‌/ನವದೆಹಲಿ: ಕಳೆದ ಎರಡು ವಾರಗಳ ಲಾಕ್‌ಡೌನ್‌ನಿಂದ ಬೆಂದು ಬಸವಳಿದ ಶಾಂಘೈ ಜನತೆ ಮಂಗಳವಾರ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಜನಾಕ್ರೋಶಕ್ಕೆ ಮಣಿದ ಚೀನ ಸರ್ಕಾರ ಮಂಗಳವಾರ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ಈ ಘೋಷಣೆ ಹೊರಬೀಳುತ್ತಿದ್ದಂತೆ ಜನರು ಆಹಾರವಸ್ತುಗಳನ್ನು ಕೊಳ್ಳಲು ಸೂಪರ್‌ಮಾರ್ಕೆಟ್‌ಗಳಿಗೆ ಧಾವಿಸಿದ್ದಾರೆ. ಇನ್ನೂ ಕೆಲವರು “ನಮಗೆ ಸಹಾಯ ಮಾಡಿ’ ಎಂದು ಗೋಳಾಡಿದ್ದಾರೆ.

ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 14 ದಿನಗಳಿಂದ 2.50 ಕೋಟಿ ಜನ ಮನೆಗಳಲ್ಲೇ ಬಂಧಿಯಾಗಿದ್ದರು. ಈ ಪೈಕಿ ಎಷ್ಟು ಮಂದಿಗೆ ಹೊರಹೋಗಲು ಅವಕಾಶ ಕೊಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಕೆಲವು ಸೂಪರ್‌ಮಾರ್ಕೆಟ್‌ ಹಾಗೂ ಔಷಧ ಮಳಿಗೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಚೀನ ತೊರೆಯಲು ಸೂಚನೆ:
ಈ ನಡುವೆ, ಅಮೆರಿಕ ಸರ್ಕಾರವು ಶಾಂಘೈನಲ್ಲಿರುವ ತನ್ನ ರಾಯಭಾರ ಕಚೇರಿಯ ಸಿಬ್ಬಂದಿಗೆ (ತುರ್ತು ಕೆಲಸವಿಲ್ಲದವರಿಗೆ) ಕೂಡಲೇ ಅಲ್ಲಿಂದ ತೆರಳುವಂತೆ ಸೂಚಿಸಿದೆ.

ಇದನ್ನೂ ಓದಿ:ಗೋವಾ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಲ್ಲ: ಸಿಎಂ ಸಾವಂತ್ ಸ್ಪಷ್ಟನೆ

Advertisement

ಬೂಸ್ಟರ್‌ 6 ತಿಂಗಳಿಗೆ ಇಳಿಸಿ
ಕೊರೊನಾ ಲಸಿಕೆಯ 2ನೇ ಡೋಸ್‌ ಪಡೆದ ಬಳಿಕ ಬೂಸ್ಟರ್‌ ಡೋಸ್‌ ಪಡೆಯಲು ಇರುವ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಸಿ ಎಂದು ಕೇಂದ್ರ ಸರ್ಕಾರ ಸೀರಂ ಇನ್‌ಸ್ಟಿಟ್ಯೂಟ್‌ ಸಿಇಒ ಅಡಾರ್‌ ಪೂನಾವಾಲ ಮನವಿ ಮಾಡಿದ್ದಾರೆ.

ಹೊಸ ಹೊಸ ರೂಪಾಂತರಿಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅವಧಿ ತಗ್ಗಿಸಬೇಕೆಂದು ಕೋರಿದ್ದಾರೆ. ಈ ನಡುವೆ, ಒಮಿಕ್ರಾನ್‌ನ ಎರಡು ಹೊಸ ಉಪ ತಳಿಗಳನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ತಳಿಗಳಿಗೆ ಬಿಎ.4 ಮತ್ತು ಬಿಎ.5 ಎಂದು ಹೆಸರಿಡಲಾಗಿದೆ.

ಎಚ್ಚರಿಕೆಯಿರಲಿ ಎಂದ ವೈದ್ಯರು
ದೆಹಲಿಯಲ್ಲಿ ಶೇ.0.5 ಇದ್ದ ಕೊರೊನಾ ಪಾಸಿಟಿವಿಟಿ ದರ ಕೇವಲ ಒಂದು ವಾರದಲ್ಲೇ ಶೇ.2.70ಗೆ ಏರಿಕೆಯಾಗಿದೆ. ಇದು ಮತ್ತೆ ದೇಶದಲ್ಲಿ ಸೋಂಕು ನಿಧಾನವಾಗಿ ಹೆಚ್ಚಳವಾಗುತ್ತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಹೆಚ್ಚೇನೂ ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಜನರು ಸ್ವಲ್ಪ ಎಚ್ಚರಿಕೆಯಿಂದಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉತ್ತಮ ಎಂಬ ಸಲಹೆಯನ್ನೂ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next