Advertisement

ರಂಜಿಸಿದ ಶನೀಶ್ವರ ಮಹಾತ್ಮೆ

12:30 AM Mar 01, 2019 | |

ಗುರುಪುರ-ಕೈಕಂಬದಲ್ಲಿ ಇತ್ತೀಚೆಗೆ ಜರಗಿದ “ಯಕ್ಷತರಂಗಿಣಿ’ಯ ಯಕ್ಷ ಸಂಭ್ರಮದಂಗವಾಗಿ ಹನುಮಗಿರಿ ಮೇಳದವರು ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದರು. ವಿಷ್ಣುವಾಗಿ ಎಂ.ಕೆ.ರಮೇಶ್‌ ಆಚಾರ್ಯ ಮತ್ತು ಪರಮೇಶ್ವರನಾಗಿ ಪೆರ್ಲ ಜಗನ್ನಾಥ ಶೆಟ್ಟಿಯವರದ್ದು ಚಿಕ್ಕ ಪಾತ್ರವಾದರೂ ಚೊಕ್ಕದಾದ ನಿರ್ವಹಣೆ. ಪ್ರಜ್ವಲ್‌ ಕುಮಾರ್‌ ಬೃಹಸ್ಪತಿ ಋಷಿಯಾಗಿ ಮಾತಿನ ವೈಖರಿಯಿಂದ ಮೆಚ್ಚುಗೆಗೆ ಪಾತ್ರರಾದರು. ಶನೀಶ್ವರನಾಗಿ ಪೂರ್ವಾರ್ಧದಲ್ಲಿ ಸದಾಶಿವ ಶೆಟ್ಟಿಗಾರ ಹಾಗೂ ಉತ್ತರಾರ್ಧದಲ್ಲಿ ಶಿವರಾಮ್‌ ಜೋಗಿಯವರ ಗತ್ತು ಗಾಂಭೀರ್ಯದ ಪಾತ್ರ ನಿರ್ವಹಣೆ ಅಮೋಘವಾಗಿತ್ತು. ಜಗದಾಭಿರಾಮ (ಭೃಗುರಾಜ), ಸದಾಶಿವ ಕುಲಾಲ್‌ (ಸತ್ಯಶೇಖರ), ಅಕ್ಷಯ್‌ ಭಟ್‌(ಸತ್ಯವ್ರತ),ಬಂಟ್ವಾಳ ಜಯರಾಮ ಆಚಾರ್ಯ (ದೂತ ಹಾಗೂ ರೈತ) ಪಾತ್ರಕ್ಕೆ ನ್ಯಾಯ ಒದಗಿಸಿದರು. 

Advertisement

ಯಾವುದೇ ಗುಣದ ಪಾತ್ರಕ್ಕೂ ಜೀವ ತುಂಬಬಲ್ಲ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿಯವರು ವಿಕ್ರಮಾದಿತ್ಯನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅವರ ಅರ್ಥಗಾರಿಕೆ ಕೇಳಲು ಬಹಳ ಸೊಗಸು. ಅಪಾರ ಶಬ್ದ ಭಂಡಾರ ಹೊಂದಿರುವ ಸೀತಾರಾಮ್‌ ಕುಮಾರ್‌ ಮಂತ್ರವಾದಿ, ಕುದುರೆ ವ್ಯಾಪಾರಿ ಹಾಗೂ ನಂದಿ ಶೆಟ್ಟರಾಗಿ ನಗೆಗಡಲಲ್ಲಿ ತೇಲಿಸಿದರು. ದರೋಡೆಕೋರರ ಪೈಪೋಟಿಯ ದಿಗಿಣ ಮುದನೀಡಿತು. ನಂದಿ ಶೆಟ್ಟಿಯ ಮಗಳು ಅಲೋಳಿಕೆಯಾಗಿ ಸಂತೋಷ್‌ ಹಿಲಿಯಾಣ ಸೊಬಗಿನ ನಾಟ್ಯ ಹಾಗೂ ಮೋಹಕ ಮಾತುಗಳಿಂದ ಮನ ಸೆಳೆದರು. ಚಂದ್ರಸೇನ ಮಹಾರಾಜನಾಗಿ ಸುಬ್ರಾಯ ಹೊಳ್ಳ ಮತ್ತು ಮಗಳು ಪದ್ಮಾವತಿಯಾಗಿ ರಕ್ಷಿತ್‌ ಪಡ್ರೆ ತಮಗಿದ್ದ ಸೀಮಿತ ಅವಕಾಶದಲ್ಲೇ ಪ್ರತಿಭೆಯನ್ನು ಮೆರೆದರು. ಕೈಕಾಲು ಕಳೆದುಕೊಂಡು ವ್ಯಥೆಪಡುವ ವಿಕ್ರಮನ ಪಾತ್ರಕ್ಕೆ ಜಯಾನಂದ ಸಂಪಾಜೆ ಜೀವ ತುಂಬಿದರು.ಪದ್ಯಾಣ ಗಣಪತಿ ಭಟ್‌ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅವರ ಸಂಪ್ರದಾಯಬದ್ಧವಾದ ಭಾಗವತಿಕೆ ಇಡೀ ಪ್ರಸಂಗದ ಹೆಗ್ಗುರುತಾಗಿತ್ತು. 

ನರಹರಿ ರಾವ್‌ ಕೈಕಂಬ 

Advertisement

Udayavani is now on Telegram. Click here to join our channel and stay updated with the latest news.

Next